ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೆಕ್ಕೆಜೋಳ ಬೆಲೆ ಕುಸಿತ: ಆತಂಕ

Lingaraj Badiger
Updated On : 11 Oct 2013, 11:21 am

ಹಗರಿಬೊಮ್ಮನಹಳ್ಳಿ: ಈ ಬಾರಿ ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ರೈತರಿಗೆ ತೀವ್ರ ನಿರಾಸೆಯಾಗಿದೆ. ಒಂದೆರಡು ದಿನಗಳ ಅಂತರದಲ್ಲೇ ಇಲ್ಲಿನ ಮಾರುಕಟ್ಟೆಯಲ್ಲಿ  ಕ್ವಿಂಟಲ್ ಮೆಕ್ಕಜೋಳಕ್ಕೆ ರು. 200ರಿಂದ 300 ದಿಢೀರ್ ಇಳಿಕೆ ಕಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನಾದ್ಯಂತ ಮೆಕ್ಕೆಜೋಳ ಕಟಾವು ಪ್ರಕ್ರಿಯೆ ಬಿರುಸಾಗಿ ಸಾಗಿದ್ದು, ಎಂದಿಗಿಂತಲೂ ಈಗ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳದ ಆವಕ ಮಾರುಕಟ್ಟೆಗೆ ಹರಿದು ಬರುತ್ತಿದೆ. ಈ ಸಮಯದಲ್ಲಿ ದಿಢೀರ್ ಬೆಲೆ ಇಳಿಕೆಯಾಗಿರುವುದು ಸಹಜವಾಗಿಯೇ ಬಿಸಿಲೂರಿನ ಮೆಕ್ಕೆಜೋಳ ಬೆಳೆಗಾರನಿಗೆ ಬರಸಿಡಿಲು ಬಡಿದಂತಾಗಿದೆ. ನಾಲ್ಕೈದು ದಿನಗಳ ಹಿಂದಷ್ಟೆ ಇಲ್ಲಿನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ರು. 1,550ರಿಂದ 1,600 ವರೆಗೆ ಧಾರಣೆ ಇತ್ತು. ಆದರೆ ಮಂಗಳವಾರ ಮತ್ತು ಬುಧವಾರ ರು. 1260-1270ಕ್ಕೆ ಕುಸಿದಿದೆ.
ಬೆಲೆ ಇಳಿಕೆ: ನಾಲ್ಕು ದಿನಗಳ ಅಂತರದಲ್ಲಿ ಕ್ವಿಂಟಲ್‌ಗೆ ಮುನ್ನೂರು ರುಪಾಯಿ ಇಳಿದಿರುವುದು ಎರಡ್ಮೂರು ವರ್ಷಗಳಿಂದ ಬರ ಅನುಭವಿಸಿ ಈ ಬಾರಿ ಸ್ವಲ್ಪ ಹೆಚ್ಚು ಮಳೆಯಿಂದ ಬೆಳೆದಿದ್ದ ಮೆಕ್ಕೆಜೋಳಕ್ಕೆ ಬೆಲೆ ಕುಸಿತವಾಗಿರುವುದು ರೈತರಿಗೆ ತೀರಾ ನಿರಾಸೆ ಉಂಟುಮಾಡಿದೆ. ಮಾರುಕಟ್ಟೆಯಲ್ಲಿನ ಬೆಲೆ ಇಳಿಕೆ ವೇಗ ನೋಡಿದರೆ ಅದು ಕ್ವಿಂಟಲ್‌ಗೆ ಒಂದು ಸಾವಿರ ರು.ವರೆಗೆ ಬಂದು ನಿಲ್ಲಬಹುದೆಂಬ ಲಕ್ಷಣಗಳು ಗೋಚರಿಸಿವೆ.
ಖುಷ್ಕಿಯಲ್ಲಿ ಹೆಚ್ಚು: ಸಜ್ಜೆಯಂತೆ ಮೆಕ್ಕೆಜೋಳವನ್ನು ಈ ತಾಲೂಕಿನ ಖುಷ್ಕಿ ಭೂಮಿ (ಮಳೆಯಾಶ್ರಿತ)ಯಲ್ಲಿಯೇ ಅಧಿಕ ಪ್ರಮಾಣದಲ್ಲಿ ರೈತರು ಬೆಳೆದಿದ್ದಾರೆ. ಈ ಸಲ 18,807 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ಇಲ್ಲಿನ ಕೃಷಿ ಇಲಾಖೆ ಅಂದಾಜಿಸಿತ್ತು. ಆದರೆ ಇಲಾಖೆ ಅಂದಾಜಿಗಿಂತಲೂ ಅಧಿಕ ಪ್ರಮಾಣದಲ್ಲಿ ಅಂದರೆ ಸುಮಾರು 22 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಇನ್ನು ಕೊಳವೆಬಾವಿ, ಏತನೀರಾವರಿ ಸೇರಿದಂತೆ ವಿವಿಧ ನೀರಾವರಿ ಮೂಲಗಳಿಂದ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಈಗ ಎಲ್ಲಡೆ ಕಟಾವು ಬಿರುಸುಗೊಂಡಿದ್ದು, ನಿತ್ಯ ಹತ್ತಾರು ಲೋಡ್‌ನಷ್ಟು ಮೆಕ್ಕೆಜೋಳ ಮಾರುಕಟ್ಟೆಗೆ ಪೂರೈಕೆಯಾಗಲು ಸಿದ್ಧಗೊಳ್ಳುತ್ತಿದೆ. ಅಕ್ಕಪಕ್ಕದ ಕೂಡ್ಲಿಗಿ, ಹೂವಿನಹಡಗಲಿ, ಹರಪ್ಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಿಂದಲೂ ಮೆಕ್ಕೆಜೋಳ ಹಗರಿಬೊಮ್ಮನಹಳ್ಳಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ.

ಬೆಳೆಗಾರನಿಗೆ ನಷ್ಟ: ಈ ನಡುವೆ ಪ್ರತಿವರ್ಷ ಸುಗ್ಗಿಕಾಲದಲ್ಲಿ ಮೆಕ್ಕೆಜೋಳದ ಬೆಲೆ ಇಳಿಕೆ ಸರ್ವೆ ಸಾಮಾನ್ಯ. ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ತೆರೆದು ಮೆಕ್ಕೆಜೋಳ ಖರೀದಿಗೆ ಮುಂದಾಗುತ್ತದೆ. ಆದರೆ ಈ ವೇಳೆಗೆಲ್ಲ ರೈತರ ಶೇ. 80ರಷ್ಟು ಫಸಲು ಮಾರಾಟವಾಗಿರುತ್ತದೆ. ಹಣ ಇರುವ ಕೆಲ ವ್ಯಾಪಾರಸ್ಥರು ರೈತರ ಹೆಸರಿನಲ್ಲಿ ತಾವು ಸಂಗ್ರಹಿಸಿರುವ ಮೆಕ್ಕೆಜೋಳವನ್ನೆ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಲಾಭ ಮಾಡಿಕೊಳ್ಳುವುದು ಇಲ್ಲಿ ನಡೆದಿದೆ. ಮೆಕ್ಕೆಜೋಳದ ಬೆಲೆ ಏರಿಳಿತ ಹಲವರನ್ನು ರಾತ್ರೋರಾತ್ರಿ ಸಿರಿವಂತರನ್ನಾಗಿಸಿದರೆ, ಬೆಳೆಗಾರನ ನಷ್ಟಕ್ಕೆ ಕಾರಣವಾಗಿದೆ.

ನಿರೀಕ್ಷೆ ಹುಸಿ: ಫಸಲು ಕೊಯ್ಲು ಮಾಡುವ ವೇಳೆಗೆ ಮಾರುಕಟ್ಟೆಯ ಬೆಲೆ ಕಂಡು (ಕ್ವಿಂಟಲ್‌ಗೆ ರು. 1,700) ಈ ಸಲ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಮಂಗಳವಾರ, ಬುಧವಾರದಿಂದ ಬೆಲೆ ಇಳಿಕೆಯಿಂದಾಗಿ ಲಾಭ ಬರುವುದಿರಲಿ, ನಾವು ಮಾಡಿರುವ ವೆಚ್ಚ ಸರಿದೂಗಿದರೆ ಸಾಕೆನ್ನುವಂತಾಗಿದೆ. ಬೆಲೆ ಇಳಿಕೆ ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿಸಿದೆ ಎನ್ನುತ್ತಾರೆ ಎಚ್.ಪಿ. ಶಿವಶಂಕರಗೌಡ.

ಖರೀದಿ ಕೇಂದ್ರ ಆರಂಭಿಸಿ
ಬೆಳೆ ಹೊಲದಲ್ಲಿ ಇದ್ದಾಗ ಉತ್ತಮ ಬೆಲೆ ಇರುತ್ತದೆ. ಆದರೆ ಅದೇ ಬೆಳೆ ಕೈಗೆ ಬರುವಷ್ಟರಲ್ಲಿ ಬೆಲೆ ಇಳಿಯುತ್ತದೆ. ಕೂಡಲೇ ರಾಜ್ಯ ಸರ್ಕಾರ ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ತಾಲೂಕಿನಲ್ಲಿ ತೆರೆದು, ಬೆಳೆಗಾರನನ್ನು ಬೆಲೆ ಇಳಿಕೆ ಬಾಧೆಯಿಂದ ರಕ್ಷಿಸಬೇಕು. ಅಲ್ಲದೆ ಕ್ವಿಂಟಲ್‌ಗೆ ರು. 2,000 ಬೆಂಬಲ ಬೆಲೆ ನಿಗದಿಪಡಿಸಬೇಕು.
- ವರದಾಪುರ ಗೋಣಿಬಸಪ್ಪ, ರೈತ ಸಂಘದ ತಾಲೂಕಾಧ್ಯಕ್ಷ
- ಹುಳ್ಳಿ ಪ್ರಕಾಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement