ವಿದ್ಯಾರ್ಥಿಗಳ ಶವ ಪತ್ತೆ
ಬಳ್ಳಾರಿ: ತುಂಗಭದ್ರಾ ಎಚ್ಎಲ್ ಕಾಲುವೆಯಲ್ಲಿ ಕೊಚ್ಚಿಹೋದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಶವಗಳು ಶುಕ್ರವಾರ ಬಂಡಿಹಟ್ಟಿಯ ಹಿಂಭಾಗದ ಕಾಲುವೆಯಲ್ಲಿ ಪತ್ತೆಯಾಗಿದ್ದು, ಶವಪರೀಕ್ಷೆಯ ನಂತರ ಪೋಷಕರಿಗೆ ಒಪ್ಪಿಸಲಾಗಿದೆ.
ಬಳ್ಳಾರಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಭಿಷೇಕ್, ಅರವಿಂದ ಅಲ್ಲೀಪುರದಲ್ಲಿ ಬುಧವಾರ ಈಜಾಡಲು ಹೋದಾಗ ಕೊಚ್ಚಿಕೊಂಡು ಹೋಗಿದ್ದರು. ಆದರೆ ಶವಗಳು ಸಿಕ್ಕಿರಲಿಲ್ಲ. ಕಳೆದೆರಡು ದಿನಗಳಿಂದ ಶವಗಳ ಶೋಧ ಕಾರ್ಯವನ್ನು ಪೊಲೀಸರು ಹಾಗೂ ವಿದ್ಯಾರ್ಥಿಗಳ ಪೋಷಕರು ನಡೆಸಿದ್ದರು. ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಅಭಿಷೇಕ್ ಶವ ಹಾಗೂ ಮಧ್ಯಾಹ್ನ 2.30ರ ಸುಮಾರಿಗೆ ಅರವಿಂದನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.