ಕಾರ್ಯದರ್ಶಿ ವಿರುದ್ಧ ದಲಾಲಿ, ಖರೀದಿದಾರರ ಪ್ರತಿಭಟನೆ
ಕೊಟ್ಟೂರು: ಇಲ್ಲಿನ ಎಪಿಎಂಸಿ ಕಾರ್ಯದರ್ಶಿ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಲ್ಲಾಳಿಗಳು ಮತ್ತು ಖರೀದಿದಾರರು ಎಪಿಎಂಸಿ ಕಾರ್ಯಾಲಯದ ಬಳಿ ಶನಿವಾರ ಕೆಲಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದಲಾಲಿ ಮತ್ತು ಖರೀದಿದಾರರ ಸಂಘದ ಅಧ್ಯಕ್ಷ ಪತ್ತಿಕೊಂಡ ಗಣೇಶಪ್ಪ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಎಪಿಎಂಸಿ ಕಚೇರಿಗೆ ಆಗಮಿಸಿದ ನೂರಾರು ಸಂಖ್ಯೆಯ ವ್ಯಾಪಾರಸ್ಥರು, ಕಾರ್ಯದರ್ಶಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ವಿನಾಕಾರಣ ತಗಾದೆ ತೆಗೆದರೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾರ್ಯದರ್ಶಿ ವರ್ತಕರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಟೆಂಡರ್ನಲ್ಲಿ ಉತ್ಪನ್ನಗಳ ಧಾರಣೆ ಕಡಿಮೆಯಾದರೆ ಅದಕ್ಕೆ ದಲಾಲರನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ದಲಾಲರು, ವರ್ತಕರು ಆರೋಪಿಸಿದರು. ವರ್ತಕರ ಸಂಘದ ಅಧ್ಯಕ್ಷ ಪತ್ತಿಕೊಂಡ ಗಣೇಶಪ್ಪ, ದಲಾಲರ, ಬಿ.ಎಸ್. ವೀರೇಶ್, ಪಿ. ಶಂಭುನಾಥ, ನಿರ್ಮಲ್ ದಾರಿವಾಲ್, ಎಚ್. ಚಂದ್ರಯ್ಯ, ಚಂದ್ರಪ್ಪ, ರಾಂಪುರ ಬರಮಣ್ಣ, ಕಾಮಶೆಟ್ಟಿ ಕೊಟ್ರೇಶ್, ಎಚ್. ಗುರುಬಸವರಾಜ, ಎನ್. ವೀರಭದ್ರಪ್ಪ, ಮಹೇಂದ್ರಕುಮಾರ್, ಬಾಬುಲಾಲ್, ಬಿ.ಪ್ರಕಾಶ್, ಮತ್ತಿತರರು ಪ್ರತಿಭಟನೆಯಲ್ಲಿದ್ದರು.