ಜಾತಿ, ಧರ್ಮ ಮೀರಿ ಭಾವನೆಗಳು ಬೆಸೆಯಲಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 12
ಅಕ್ಕ-ಪಕ್ಕದಲ್ಲೇ ವಾಸಿಸುವರಲ್ಲಿ ಸಹೋದರತೆ, ಸೌಹಾರ್ದ ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಜಾತಿ, ಧರ್ಮಗಳನ್ನು ಮೀರಿ ಭಾವನೆಗಳು ಬೆಸೆಯುವಂತಾಗುವ ಅನಿವಾರ್ಯತೆ ಇದೆ ಎಂದು ಲೇಖಕ ಡಾ. ವೆಂಕಟಗಿರಿ ದಳವಾಯಿ ತಿಳಿಸಿದರು.
ತಾಲೂಕಿನ ಧೂಪದಹಳ್ಳಿ ಸಮುದಾಯ ಭವನದಲ್ಲಿ ಶನಿವಾರ ಆಯೋಡಿಸಲಾಗಿದ್ದ ಸ್ನೇಹ-ಸೇತು-ಸಂವಹನ ಸಂಸ್ಥೆ ಉದ್ಘಾಟನೆ ಹಾಗೂ ಭಾವ ಬಯಲು ಭಾವಗೀತೆಗಳ ಧ್ವನಿಸುರುಳಿ ಸಿಡಿ ಬಿಡುಗಡೆ ಮಾಡಿ ಮಾತನಾಡಿದರು.
ಉಜ್ಜಿನಿ ಜ್ಞಾನಗುರು ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಅರುಣ್ ಜೋಳದ ಕೂಡ್ಲಿಗಿ, ಭೀಮಣ್ಣ ಗಜಾಪುರ, ಸಿದ್ದು ದೇವರಮನಿ ಹಾಗೂ ನಾಗು ತಳವಾರ ರಚಿತ ಭಾವಗೀತೆಗಳ ಧ್ವನಿಸುರುಳಿ ಭಾವ-ಬಯಲು ಸಿಡಿಗೆ ಹಾಡುಗಳನ್ನು ಬರೆದಿದ್ದಾರೆ. ಬೆಂಗಳೂರಿನ ಎಂ.ಎಸ್. ಮಾರುತಿ ವಾದ್ಯ ಸಂಯೋಜನೆಯಲ್ಲಿ ಅಜಯ್ ವಾರಿಯರ್, ನಂದಿತಾ, ಚಳ್ಳಕೆರೆ ಸ್ನೇಹಾ, ರಮೇಶ್ಚಂದ್ರ ಮುಂತಾದ ಗಾಯಕರು ಹಾಡಿದ್ದಾರೆ.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಸ್ನೇಹ ಸೇತು ಸಂವಹನ ಸಂಸ್ಥೆ ಅಧ್ಯಕ್ಷ ಗೂಳಿ ಮಲ್ಲಿಕಾರ್ಜುನ ಕೊಟ್ಟೂರು ಹೋಬಳಿ ಕಸಾಪ ಘಟಕ ಅಧ್ಯಕ್ಷೆ ನಿರ್ಮಲಾ ಶಿವನಗುತ್ತಿ, ರಂಗ ನಿರ್ದೇಶಕ ಸಾಂಬಶಿವ ದಳವಾಯಿ, ಲೇಖಕ ಅಂಚೆ ಕೊಟ್ರೇಶ್, ಉಪನ್ಯಾಸಕರಾದ ಡಾ. ಸತೀಶ್ ಪಾಟೀಲ್, ಎಚ್.ಎಂ. ನಿರಂಜನ, ಭಾವಗೀತೆ ರಚಿಸಿದ ಭೀಮಣ್ಣ ಗಜಾಪುರ, ಸಿದ್ದು ದೇವರಮನಿ, ನಾಗು ತಳವಾರ್, ಚಳ್ಳಕೆರೆ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ. ಬಸವರಾಜ, ರಾಜೇಶ್ ತಲ್ವಾರ್, ಶಾಸಕರ ಆಪ್ತ ಸಹಾಯಕ ಮರುಳಸಿದ್ಧಪ್ಪ ಇದ್ದರು.
ಶಿಕ್ಷಕ ವರಕನಹಳ್ಳಿ ಕೊಟ್ರೇಶ್ ಸ್ವಾಗತಿಸಿದರು. ತಳವಾರ ಶರಣಪ್ಪ ಕಾರ್ಯಕ್ರಮ ನಿರ್ವಹಿಸಿದರು. ಹೂಡೇಂ ಕೃಷ್ಣಮೂರ್ತಿ ವಂದಿಸಿದರು.