ನಾಡಹಬ್ಬ ದಸರಾಕ್ಕೆ ಖರೀದಿ ಬಲುಜೋರು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 12
ಜಾತಿ-ಭೇದವಿಲ್ಲದೇ ನಾಡಿನಾದ್ಯಂತ ಎಲ್ಲ ಸಮುದಾಯದವರು ಸಡಗರ-ಸಂಭ್ರಮದಿಂದ ಆಚರಿಸುವ ನಾಡಹಬ್ಬ ದಸರಾ ಬಿರುಬಿಸಿಲ ನಾಡು ಬಳ್ಳಾರಿಯಲ್ಲೂ ಕಳೆಗಟ್ಟಿದೆ.
ಆಷಾಢ ಕಳೆದು ಶ್ರಾವಣ ಆರಂಭವಾದರೆ ಹಿಂದೂ ಧರ್ಮೀಯರಿಗೆ ಹಬ್ಬ ಹರಿದಿನಗಳ ಸಂಭ್ರಮ. ಅದರಲ್ಲೂ ಆಶ್ವಿಜ ಮಾಸದ ಶುಕ್ಲ ಪಕ್ಷದಲ್ಲಿ ಪ್ರಥಮ ತಿಥಿಯಿಂದ ದಶಮಿಯ ವರೆಗೆ 10 ದಿನಗಳ ಕಾಲ ಮಹಿಳೆಯರು, ಮಕ್ಕಳು, ಬನ್ನಿ ಮಹಾಕಾಳಿ ದೇವಿಗೆ ನಿತ್ಯ ಪೂಜೆ, ಪುನಸ್ಕಾರಗಳಲ್ಲೇ ಅಧಿಕ ಕಾಲ ಕಳೆಯುವುದು ಸಹಜ. ಇನ್ನು ನಗರದ ಶಕ್ತಿ ದೇವಿ ದೇವಸ್ಥಾನಗಳಲ್ಲಂತೂ ಶರನ್ನವರಾತ್ರಿ ನಿಮಿತ್ತ ಒಂಬತ್ತು ದಿನಗಳ ಕಾಲ ವಿಶೇಷ ಅಲಂಕಾರ, ಪೂಜೆ, ಹೋಮ, ಸಂಜೆ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮಗಳು, ನಂತರ ಅನ್ನ ಸಂತರ್ಪಣೆ ಸೇರಿದಂತೆ ಇತರೆ ಹಬ್ಬಗಳಿಗಿಂತ ದಸರಾ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಆಟೋ, ಬಸ್, ಲಾರಿ ಸೇರಿದಂತೆ ಇತರೆ ವಾಹನಗಳ ಸವಾರರಿಗಂತೂ ಮಹಾನವಮಿ ಆಯುಧ ಪೂಜೆ ಹಬ್ಬವಂತೂ ಬಹು ವಿಶೇಷ. ಹಬ್ಬದ ಮುನ್ನಾದಿನವಾದ ಶನಿವಾರ ವಾಹನಗಳನ್ನು ಶುಭ್ರಗೊಳಿಸುತ್ತಾ, ತಮ್ಮ ಅಭಿರುಚಿಗೆ ತಕ್ಕಂತೆ ಬಗೆಬಗೆಯ ಹೂವುಗಳನ್ನು ಖರೀದಿಯಲ್ಲಿ ನಿರತರಾಗಿದ್ದರು. ಅಂಗಡಿ, ಮುಂಗಟ್ಟುಗಳು, ಕಚೇರಿ, ಕಾರ್ಖಾನೆಗಳೂ ಶನಿವಾರ ಬೆಳಗ್ಗೆಯಿಂದಲೇ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಬಣ್ಣ ಹಚ್ಚಿ, ವಿದ್ಯುತ್ ದೀಪ, ವಿವಿಧ ಹೂವು, ತಳಿರು ತೋರಣಗಳಿಂದ ಅಲಂಕರಿಸುವ ದೃಶ್ಯ ಸಾಮಾನ್ಯನವಾಗಿತ್ತು.
ಹಬ್ಬ-ಹರಿದಿನಗಳಲ್ಲಿ ಬಗೆಬಗೆಯ ಹೂ-ಹಣ್ಣುಗಳು, ಬಾಳೆಕಂಬ, ತಳಿರು ತೋರಣಗಳಿಗೆ ಎಲ್ಲಿಲ್ಲದ ಬೇಡಿಕೆ.
ಅದರಲ್ಲಂತೂ ಶನಿವಾರ ಆಯುಧ ಪೂಜೆ, ವಿಜಯದಶಮಿ ಹಬ್ಬದ ಮುನ್ನ ದಿನವಾದ್ದರಿಂದ ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣ, ಬೆಂಗಳೂರು ರಸ್ತೆ, ಕೌಲ್ಬಜಾರ್, ಹಾಗೂ ಇತರೆ ಪ್ರದೇಶಗಳು ಜನರಿಂದ ಗಿಜಿಗುಡುತ್ತಿದ್ದವು. ಒಂದು ಮಾರು ಸೇವಂತಿ ಹೂವಿಗೆ 80ರಿಂದ 100, ಇನ್ನು ಚೆಂಡು ಹೂವಿಗೆ ರು. 40ರಿಂದ 50, ಚೆಂಡು ಸಸಿಗಳು ಒಂದು ಕಟ್ಟಿಗೆ 60ರಿಂದ 70, ಒಂದು ಕಟ್ಟು ಅಡಿಕೆ ಹೂವು, ರೇಷ್ಮೆ ಹೂ ಸೇರಿದಂತೆ ಇತರೆ ಹೂವುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದವು. ಮಾವಿನ ತೋರಣ, ಬಾಳೆಕಂಬ, ಕುಂಬಳಕಾಯಿ ಬೆಲೆ ಕಳೆದ ಬಾರಿಗಿಂತ ಹೆಚ್ಚಿದ್ದರೂ ಅದಾವುದನ್ನೂ ಲೆಕ್ಕಿಸದ ಜನ ಖರೀದಿಯಲ್ಲಿ ನಿರತರಾಗಿದ್ದರು.
ಹಬ್ಬ-ಹರಿದಿನಗಳಲ್ಲಿ ಬಗೆಬಗೆಯ ಹೂ-ಹಣ್ಣುಗಳು, ಬಾಳೆಕಂಬ, ತಳಿರು ತೋರಣಗಳಿಗೆ ಎಲ್ಲಿಲ್ಲದ ಬೇಡಿಕೆ. ಶನಿವಾರ ಆಯುಧ ಪೂಜೆ, ವಿಜಯದಶಮಿ ಹಬ್ಬದ ಮುನ್ನಾ ದಿನವಾದ್ದರಿಂದ ಕನಕದುರ್ಗಮ್ಮ ದೇವಸ್ಥಾನ ಆವರಣ, ಬೆಂಗಳೂರು ರಸ್ತೆ, ಕೌಲ್ಬಜಾರ್, ಹಾಗೂ ಇತರೆ ಪ್ರದೇಶಗಳು ಜನರಿಂದ ಗಿಜುಗುಡುತ್ತಿದ್ದವು.
ಕಳೆದ ಬಾರಿಗಿಂತ ಈ ಬಾರಿ ಹೂವು, ಹಣ್ಣು, ಇತರೆ ಪೂಜಾ ಸಾಮಗ್ರಿಗಳ ಬೆಲೆಗಳು ಏರಿಕೆಯಾಗಿದೆ. ಆದರೂ ಹಬ್ಬ ಬಿಡೋಕ್ಕಾಗಲ್ಲ. ಸಾಧ್ಯವಾದಷ್ಟು ಖರೀದಿಸುತ್ತಿದ್ದೇವೆ. ಬೇಕಾಗುವ ಅಗತ್ಯ ವಸ್ತುಗಳ ಬೆಲೆಗಳೆಲ್ಲವೂ ಏರಿಕೆಯಾಗಿದೆ. ಇದ್ದಿದ್ರಲ್ಲೇ ಹಬ್ಬ ಆಚರಿಸಬೇಕು.
- ಓಬಳೇಶ್,
ಗ್ರಾಹಕ
ಎರಡು ದಿನಗಳಿಂದ ಜಗಳೂರು, ಚಿತ್ರದುರ್ಗ, ಆಂಧ್ರದ ರಾಯದುರ್ಗ ಸೇರಿದಂತೆ ದೂರದ ಊರುಗಳಿಂದ ಹೂವು ತಂದು ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ಹೆಚ್ಚಿನ ಬೇಡಿಕೆ ಇದ್ದು, ಬೆಲೆ ಏರಿಕೆಯಾಗಿ ದೆ. ಆದರೆ ಕೊಳ್ಳುವವರು ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ವ್ಯಾಪಾರ ಅಷ್ಟಕಷ್ಟೇ.
- ಅನಸೂಯಾ, ಹೂ ವ್ಯಾಪಾರಿ.
ವೈ.ಎಂ. ಸಿದ್ಧಲಿಂಗಸ್ವಾಮಿ