ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಫುಟ್‌ಬಾಲ್ ಆಡಲಿಕ್ಕೆ ಸಜ್ಜಾದ ಗಣಿನಾಡು

Mainashree
Updated On : 12 Oct 2013, 11:14 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 12
ಗಣಿ ವಿಷಯದಲ್ಲಿ ಹೆಸರು ಮಾಡಿರುವ ಬಳ್ಳಾರಿ ಇದೀಗ ಕರ್ನಾಟಕ ರಾಜ್ಯದಲ್ಲಿ ಮೊದಲ ಹೊನಲು ಬೆಳಕಿನ ಸಿಂಥೆಟಿಕ್ ಪುಟ್‌ಬಾಲ್ ಕ್ರೀಡಾಂಗಣವನ್ನು ರು. 6.5 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮೂಲಕ ಕ್ರೀಡೆಯಲ್ಲಿ ತನ್ನ ಆಸಕ್ತಿ ಮೆರೆದಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರು. 6.5 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಎಫ್‌ಎಎಫ್‌ಎ ಸಂಸ್ಥೆ ನಿಗದಿಪಡಿಸಿದ 110್ಢ65 ಮೀಟರ್ ವಿಸ್ತೀರ್ಣದಲ್ಲಿ ಪುಟ್‌ಬಾಲ್ ಮೈದಾನ ನಿರ್ಮಿಸಲಾಗಿದೆ. ಜೆಎಸ್‌ಡಬ್ಲ್ಯೂ ಅವರ ನೆರವಿನಿಂದ ಮೈದಾನಕ್ಕೆ ಸಿಂಥೆಟಿಕ್ ಪಾಲಿಗ್ರಾಸ್ ಟರ್ಪ್‌ನ್ನು ಅಳವಡಿಸಲಾಗಿದೆ. ಟರ್ಫ್ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ್ದು, ಇದನ್ನು ಚೀನಾ ದೇಶದಿಂದ ತರಿಸಲಾಗಿದೆ. ಕ್ರೀಡಾಂಗಣದಲ್ಲಿ ಹೊನಲು ಬೆಳಕು (ಪ್ಲಟ್ ಲೋಟ್) ವ್ಯವಸ್ಥೆ ಕಲ್ಪಿಸಲಾಗಿದೆ.
ಸುಸಜ್ಜಿತ ಗ್ಯಾಲರಿ: 2500 ಪ್ರೇಕ್ಷಕರು ಕುಳಿತು ಪಂದ್ಯಗಳನ್ನು ವೀಕ್ಷಿಸಲು ವ್ಯವಸ್ಥಿತ ಪ್ರೇಕ್ಷಕ ಗ್ಯಾಲರಿ, ಮಾಧ್ಯಮದವರಿಗೆ ಪ್ರತ್ಯೇಕ ಗ್ಯಾಲರಿಯನ್ನೂ ನಿರ್ಮಿಸಲಾಗಿದೆ. ವೀಕ್ಷಕರ ಗ್ಯಾಲರಿಗೆ ನೀಲಿ, ಹಳದಿ, ಹಸಿರು, ಕೆಂಪು ಬಣ್ಣ ಅಳವಡಿಸಲಾಗುತ್ತಿದೆ. ಆಕರ್ಷಕ ಡಿಜಿಟಲ್ ಸ್ಕೋರ್‌ಬೋರ್ಡ್ ಜೋಡಿಸಲಾಗುತ್ತಿದ್ದು, ಕ್ರೀಡಾಳುಗಳಿಗೆ 8 ವಿಶ್ರಾಂತಿ ಕೊಠಡಿ, ವಸ್ತ್ರ ಬದಲಿಸುವ ಕೊಠಡಿ, ಸಹಾಯಕ ರೆಫರಿಗಳಿಗೆ ವಿಶ್ರಾಂತಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಹೊನಲು ಬೆಳಕಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ 4 ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿಗಾಗಿ ಕ್ರೀಡಾಂಗಣ ವ್ಯಾಪ್ತಿಯಲ್ಲೇ ಒಂದು ಕೊಳವೆಬಾವಿ ಕೊರೆದು ಶುದ್ಧೀಕರಣ ಯಂತ್ರ (ಫಿಲ್ಟರ್) ಅಳವಡಿಸಲಾಗಿದೆ.
ಹೋಂ ಥಿಯೇಟರ್ ಇದೆ: ಕೆಳಮಹಡಿಯಲ್ಲಿ ಟೇಬಲ್ ಟೆನ್ನೀಸ್ ಕೊಠಡಿ ನಿರ್ಮಿಸಲಾಗಿದೆ. ಅದಕ್ಕಾಗಿ 4 ಟೇಬಲ್ ಅಳವಡಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಜಿಮ್, ಥ್ರರ್ಡ್‌ಮಿಲ್, ಜಿಮ್ ಸೈಕಲ್, ಮಿನಿ ಹೋಮ್ ಜಿಮ್,  ಸಿಂಗಲ್ ಸೆಷರ್ ಹೋಮ್ ಜಿಮ್, ನಾಲ್ವರು ಏಕಕಾಲದಲ್ಲಿ ಜಿಮ್ ಮಾಡಬಹುದಾದ ಪೂರ್ ಸೆಷರ್ ಮಲ್ಟಿ ಜಿಮ್, ಚೆಸ್ಟ್ ಬೆಂಡರ್, ಸ್ವಿಸ್ಟರ್, ಡಂಬಲ್ಸ್‌ಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಲಾಗಿದೆ. ವಸ್ತ್ರ ಬದಲಾವಣೆ ಕೊಠಡಿ, ಸುಸಜ್ಜಿತ ಶೌಚಾಲಯ ನಿರ್ಮಿಸಲಾಗಿದೆ. ಹೋಂ ಥಿಯೇಟರ್ ವ್ಯವಸ್ಥೆ ಇದೆ. ಉಳಿದಂತೆ ಆಡಳಿತ ಕಚೇರಿ, ಗ್ರಂಥಾಲಯ, ಚೆಸ್, ಕೇರಂ ರೂಂ ನಿರ್ಮಿಸಲಾಗಿದೆ.
ಮೊದಲ ಮಹಡಿ ಸಂಪೂರ್ಣ ಹವಾನಿಯಂತ್ರಿತದಿಂದ ಇದೆ. ಶ್ರೀಮಂತರ ಆಟವೆಂದೆ ಬಿಂಬಿತವಾದ  ಬಿಲಿಯರ್ಡ್ಸ್ (ಸ್ನೂಕರ್) ಕ್ರೀಡಾ ಕೊಠಡಿಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಬಡತನದಲ್ಲಿರುವ ಪ್ರತಿಭೆಗಳೂ ಪರಿಣಿತಿ ಪಡೆಯುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಕಂಪ್ಯೂಟರ್ಸ್ ಗೇಮಿಂಗ್ (ಎಕ್ಸ್ ಬಾಕ್ಸ್) ರೂಪಿಸಲಾಗಿದೆ. 14 ಕಂಪ್ಯೂಟರ್ ಇರುವ ಸೈಬರ್ ಕೆಫೆಯೂ ಇದೆ. 300 ಆಸನಗಳ ಹವಾನಿಯಂತ್ರಿತ ಸಭಾಂಗಣ ಅತ್ಯಾಕರ್ಷಕವಾಗಿದ್ದು, ಅತ್ಯಾಧುನಿಕ ಸೌಂಡ್ ಸಿಸ್ಟಂ, ಪವರ್ ಪಾಯಿಂಟ್ ಸ್ಕ್ರೀನ್ ಅಳವಡಿಸಲಾಗಿದೆ.
ಡಿಸಿ ಕಾಳಜಿ: 2ನೇ ಮಹಡಿಯಲ್ಲಿ ಕ್ಯಾಂಟಿನ್ ವ್ಯವಸ್ಥೆ ಇದ್ದು, ಕ್ರೀಡಾ ಸಲಕರಣಿಗಳ ಮಳಿಗೆ, ಔಷಧಿ ವಿತರಣೆ ಮಳಿಗೆಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗಿದ್ದು, ಖಜಾರಿಯಾ ಟೈಲ್ಸ್ ಬಳಸಲಾಗಿದೆ. ಆಯಾ ಕ್ರೀಡೆಗಳಿಗೆ ಸೂಕ್ತ ಮತ್ತು ಗುಣಮಟ್ಟದ ಸಲಕರಣೆಗಳನ್ನು ಲಭ್ಯವಿರುವ ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರೇ ತರಿಸಿದ್ದು, ಪ್ರತಿ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ಸ್ವತಃ ಪರಿಶೀಲಿಸಿ, ಸೂಕ್ತ ನಿರ್ದೇಶನ ನೀಡಿ ಗುಣಮಟ್ಟ ಕಾಪಾಡಲು ಕಾರಣೀಭೂತರಾಗಿದ್ದಾರೆ. ಅತ್ಯುತ್ತಮ ಕ್ರೀಡಾಂಗಣ ನಿರ್ಮಿಸಲು ಡಿಸಿ ಶ್ರಮಿಸಿದ್ದಾರೆ.
ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಖಾನಾಪುರದಿಂದ ನುರಿತ ಕ್ರೀಡಾ ತಜ್ಞರು ಆಗಮಿಸಿ ಕ್ರೀಡಾ ಸಾಮಗ್ರಿ ಅಳವಡಿಸಿದ್ದಾರೆ. ಕಾಮಗಾರಿ ನಿರ್ಮಿತಿ ಕೇಂದ್ರ ವಹಿಸಿಕೊಂಡಿದ್ದು, ಅನೇಕ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮಾದರಿಗಳನ್ನು ಕಲಿಯಲು ಅನುಕೂಲವಾಯಿತು ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ.
ಈ ಕ್ರೀಡಾಂಗಣದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳ ತರಬೇತಿ ಶಿಬಿರಗಳನ್ನು ಏರ್ಪಡಿಸಬಹುದು. ಬಳ್ಳಾರಿಯು ಫುಟ್‌ಬಾಲ್ ಮತ್ತು ಹಾಕಿ ಕ್ರೀಡೆಗೆ ಹಿಂದಿನಿಂದಲೂ ಹೆಸರುವಾಸಿಯಾಗಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹೆಮ್ಮೆಯಾಗುವ ಈ ಅದ್ಭುತ ಪುಟ್‌ಬಾಲ್ ಕ್ರೀಡಾಂಗಣ, ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.
- ರಾಜು ಬಾವಿಹಳ್ಳಿ
 ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement