ಸುದ್ದಿ ಸಂಕ್ಷೇಪ
ಇಸ್ಪೀಟ್ ಜೂಜಾಟ: 19 ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, 19 ಜನರನ್ನು ಬಂಧಿಸಿ, ಅವರಿಂದ 6300 ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕ್ಯಾದಿಗೆಹಾಳ್ದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಸಿಪಿಐ ಲಕ್ಷ್ಮೀಕಾಂತಯ್ಯ ಮಾರ್ಗದರ್ಶನದಲ್ಲಿ ಕುರುಗೋಡು ಪಿಎಸ್ಐ ಸೋಮಶೇಖರ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 19 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ರು. 6300 ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಂತರು ನಡೆದಾಡುವ ವಿಶ್ವಕೋಶ: ಕಲಾವತಿ
ಬಳ್ಳಾರಿ: ಕಡಲತೀರದ ಭಾರ್ಗವರೆಂದೇ ಬಿರುದಾಂಕಿತರಾಗಿದ್ದ ಶಿವರಾಮ ಕಾರಂತರು ಕಳೆದ ತಲೆಮಾರಿನ ಅದ್ಭುತ ಸಾಹಿತ್ಯವನ್ನು ಸೃಷ್ಟಿಸಿ ನಡೆದಾಡುವ ವಿಶ್ವಕೋಶದಂತಿದ್ದರು ಎಂದು ಸರಳಾದೇವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ಜಿ. ಕಲಾವತಿ ಹೇಳಿದರು. ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಕಾರಂತ ರಂಗಲೋಕ ಸಂಸ್ಥೆ ವತಿಯಿಂದ ಶಿವರಾಮ ಕಾರಂತರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡವಿಚಾರ ಸಂಕಿರಣ ಮತ್ತು ರಂಗಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಾರ್ಡಾ ಕಾಲೇಜಿನ ಉಪನ್ಯಾಸಕ ಸಿದ್ದರಾಮ ಕಲ್ಮಠ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಕೃಷಿ ಮಾಡದ ಸಾಹಿತ್ಯ ಕ್ಷೇತ್ರವಿಲ್ಲ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದರು. ಬಳ್ಳಾರಿಯ ಕಾರಂತ ರಂಗಲೋಕ ಸಂಸ್ಥೆಯ ಕಾರ್ಯದರ್ಶಿ ಆರ್.ಪಿ. ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ನಾಟಕ ಅಕಾಡೆಮಿ ಪುರಸ್ಕೃತ ರಮೇಶಗೌಡ ಪಾಟೀಲ್ ಮಾತನಾಡಿದರು. ಚಿಂತಕ ಕಲ್ಲುಕಂಭ ಪಂಪಾಪತಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಾಡೋಜ ಪ್ರಶಸ್ತಿ ಪುರಸ್ಕೃತೆ ಸುಭದ್ರಮ್ಮ ಮನ್ಸೂರರು ತಮ್ಮ ಕಂಠಸಿರಿಯಿಂದ ಅನೇಕ ರಂಗಗೀತೆ, ಭಾವಗೀತೆಗಳನ್ನು ಹಾಡಿ ಪ್ರೇಕ್ಷಕರ ಮನ ತಣಿಸಿದರು. ಶಿಕ್ಷಕ ಕಟ್ಟೇಗೌಡ, ಮಹೇಂದ್ರ, ಆರ್.ಪಿ. ಈಶಪ್ಪ, ಎಚ್. ಹುಲುಗಪ್ಪ, ಎಚ್. ಲೋಕರಾಜ್, ಕೀರ್ತಿ, ಲಕ್ಷ್ಮೀ, ಹನುಮಂತ, ಯಲ್ಲಪ್ಪ, ಯೋಗಾನಂದ, ನಾಸಿರುದ್ದೀನ್, ಸಂತೋಷ್, ಇತಿಹಾಸ ಉಪನ್ಯಾಸಕರಾದ ಶಶಿಕಾಂತ್, ರಾಮಣ್ಣ, ರಂಗಜಂಗಮದ ಅಣ್ಣಾಜಿ ಕೃಷ್ಣಾರೆಡ್ಡಿ, ರಂಗತೋರಣದ ಅಡವಿಸ್ವಾಮಿ, ಮಯೂರ ಕಲಾ ಸಂಘದ ಗಂಗಣ್ಣ ಇದ್ದರು.
ಮಟ್ಕಾ ಅಡ್ಡೆ ಮೇಲೆ ದಾಳಿ: ಓರ್ವ ಬಂಧನ
ಬಳ್ಳಾರಿ: ಮಟ್ಕಾ ಜೂಜಾಟ ಅಡ್ಡೆ ಮೇಲೆ ಹೊಸಪೇಟೆ ಪೊಲೀಸರು ದಾಳಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ರು. 10,050, ಮೊಬೈಲ್ ವಶಪಡಿಸಿಕೊಂಡಿರುವ ಘಟನೆ ಹೊಸಪೇಟೆಯ ಸಂಡೂರು ರಸ್ತೆಯಲ್ಲಿ ನಡೆದಿದೆ. ಶುಕ್ರವಾರ ಹೊಸಪೇಟೆ-ಸಂಡೂರು ರಸ್ತೆಯಲ್ಲಿ ಮಟ್ಕಾ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಗುರಾಡಿ ಹನುಮಂತಪ್ಪನನ್ನು ಬಂಧಿಸಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿ. ರಾಮನಗೌಡ ನೇಮಕ
ಬಳ್ಳಾರಿ: ಅಖಿಲ ಕರ್ನಾಟಕ ಯುವ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ಜಿ. ರಾಮನಗೌಡ ನೇಮಕವಾಗಿದ್ದಾರೆ. ವೇದಿಕೆಯ ರಾಜ್ಯಾಧ್ಯಕ್ಷ ಸಿದ್ದರಾಮಪ್ಪ ಸಿರಿಗೇರಿ, ಅಖಿಲ ಕರ್ನಾಟಕ ಯುವ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾಗಿ ಜಿ. ರಾಮನಗೌಡರನ್ನು ನೇಮಿಸಿ ಆದೇಶ ಹೊರಡಿಸಿದ್ದು, ಸಂಘಟನೆ, ಕಾರ್ಯಕರ್ತರ ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.