ಹಂಪಿಯಲ್ಲಿ ಪಲ್ಲಕ್ಕಿ ಉತ್ಸವ, ದೀಪೋತ್ಸವ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 14
ವಿಶ್ವವಿಖ್ಯಾತ ಹಂಪಿಯಲ್ಲಿ ದಸರಾ ಹಬ್ಬವನ್ನು ಶ್ರದ್ಧಾಭಕ್ತಿ, ಸಡಗರದಿಂದ ಆಚರಿಸಲಾಯಿತು.
ವಿರೂಪಾಕ್ಷೇಶ್ವರಸ್ವಾಮಿಯ ದೇವಸ್ಥಾನದಿಂದ ಹಂಪಿ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ ನೇತೃತ್ವದಲ್ಲಿ ಸೋಮವಾರ ಸಂಜೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ದೇವರನ್ನು ಕೂರಿಸಿಕೊಂಡು ಆನೆ ಮತ್ತು ಛತ್ರಿ-ಚಾಮರಸದೊಂದಿಗೆ ಮಂಗಳವಾದ್ಯಗಳೊಂದಿಗೆ ಎದುರು ಬಸವಣ್ಣ ಮಂಟಪದ ಬಳಿ ಇರುವ ಬನ್ನಿ ಗಿಡಕ್ಕೆ ತೆರಳಿ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮರದಿಂದ ಬನ್ನಿ ತೆಗೆದುಕೊಂಡು ಬಂದು ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಪಂಪಾದೇವಿ, ಭುವನೇಶ್ವರಿ ದೇವಿಗೆ, ಅನಂತರ ವಿದ್ಯಾರಣ್ಯ ಗುರುಗಳಿಗೆ ಬನ್ನಿ ಅರ್ಪಿಸಲಾಯಿತು. ನಂತರ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳು ತಮ್ಮ ಮಠಕ್ಕೆ ತೆರಳಿ ಮಠದ ಪೀಠಕ್ಕೆ ಬನ್ನಿ ನೀಡಿ, ಪೀಠದ ಮೇಲೆ ಕುಳಿತು ಭಕ್ತರು ನೀಡುವ ಬನ್ನಿ ಸ್ವೀಕರಿಸಿದರು.
ಸ್ಥಳೀಯ ಭಕ್ತರು ಹಂಪಿ ಕ್ಷೇತ್ರದ ರಕ್ಷಣೆ, ಅಭಿವೃದ್ಧಿ ಮತ್ತು ಸಮಸ್ತ ಭಕ್ತರ ಲೋಕಕಲ್ಯಾಣಕ್ಕಾಗಿ ನವಮಿಯ ದಿನದಂದು ಸ್ವರ್ಣಹಂಪಿ ಗಜ, ಅಶ್ವ, ಆಯುಧ, ಸಾಮ್ರಾಜ್ಯದ ಲಾಂಛನ, ಅಪರಾಜಿತಾದೇವಿ ಪ್ರಾರ್ಥನೆ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಜಯದಶಮಿಯಂದು ಸಂಜೆ 6 ಗಂಟೆಯಿಂದ ಶಮೀಪೂಜೆ ಮತ್ತು ಭಗವಂತನ ಆತ್ಮ ಜ್ಯೋತಿಸ್ವರೂಪವಾದ 10,000 ದಿವ್ಯ ಜೋತಿಗಳ ದೀಪೋತ್ಸವ ಕಾರ್ಯಕ್ರಮ ವಿರೂಪಾಕ್ಷೇಶ್ವರಸ್ವಾಮಿಯ ದೇವಸ್ಥಾನದ ಮುಂದಿನ ಆವರಣದಲ್ಲಿ ನಡೆಯಿತು.