5 ಸಾವಿರ ಮನೆಗಳಲ್ಲಿ ಲಾರ್ವಾ ಸಮೀಕ್ಷೆ
ಬಳ್ಳಾರಿ: ಶಂಕಿತ ಡೆಂಘೀ ಪ್ರಕರಣಗಳು ಕಂಡುಬಂದಿರುವ ನಗರ ಹಾಗೂ ಕೊಳಚೆ ಪ್ರದೇಶಗಳಲ್ಲಿನ ಸುಮಾರು 5000 ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಲಾಯಿತು. ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಮೀಕ್ಷೆಯಲ್ಲಿ 546 ಲಾರ್ವಾ ಕಂಡುಬಂದ ತಾಣಗಳನ್ನು ಖಾಲಿ ಮಾಡಿಸಿ, ಆರೋಗ್ಯ ಶಿಕ್ಷಣ ನೀಡಲಾಯಿತು. ಡೆಂಘೀ ಕುರಿತು ಜಾಗೃತಿ ಮೂಡಿಸಲು ಮನೆ, ಮನೆಗೆ ಆರೋಗ್ಯ ಶಿಕ್ಷಣದ ಕರಪತ್ರ ಹಂಚಲಾಯಿತು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ. ಕೃಷ್ಣಾನಾಯ್ಕ್, ತಾಲೂಕು ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಎಂ.ಜಿ. ಬಾಬುರಾವ್ ಸೇರಿ ಸಿದ್ಧಪಡಿಸಿದ ಕ್ರಿಯಾಯೋಜನೆ ಪ್ರಕಾರ ಮಹಿಳಾ ಮತ್ತು ಪುರುಷ ಕಿರಿಯ ಆರೋಗ್ಯ ಸಹಾಯಕರು, ಲಿಂಕ್ ವರ್ಕರ್ಸ್ ಹಾಗೂ ಮೇಲ್ವಿಚಾರಕರನ್ನು ಈ ಕಾರ್ಯಕ್ಕೆ ನಿಯೋಜಿಸಲಾಯಿತು. ಪಾಲಿಕೆಯ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಲಾರ್ವ ಸಮೀಕ್ಷೆ ನಡೆಸಲಾಯಿತು ಎಂದು ಬಳ್ಳಾರಿ ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.