ವಿವಿಗೆ ಕರೀಗೌಡರ ಕೊಡುಗೆ ಅಪಾರ
ಹೊಸಪೇಟೆ: ತಾಯ್ತನದ ಆಪ್ತತೆ ಮತ್ತು ಚಾಣಕ್ಯ ಪ್ರತಿಭೆಯಿಂದ ಕನ್ನಡ ವಿಶ್ವವಿದ್ಯಾಲಯ ಸಾಂಸ್ಥಿಕವಾಗಿ ಬೆಳೆಯಲು ಹಾಗೂ ಬಿಕ್ಕಟ್ಟುಗಳು ಬಂದಾಗ ಪರಿಹರಿಸಿ ಸಾಂಸ್ಥಿಕ ರೂಪಕೊಡಲು ಡಾ. ಕರೀಗೌಡ ಬೀಚನಹಳ್ಳಿ ಶ್ರಮಿಸಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಗೊಂಡಿದ್ದು, ವಿಶ್ವವಿದ್ಯಾಲಯದ ಭುವನವಿಜಯದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಕರೀಗೌಡ ಬೀಚನಹಳ್ಳಿಯವರು ಕಾನೂನು ಕಾಯಿದೆ, ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಕಾನೂನುಗಳನ್ನು ಚೆನ್ನಾಗಿ ರೂಪಿಸುತ್ತಿದ್ದರು, ಅರ್ಥೈಸುತ್ತಿದ್ದರು ಮತ್ತು ಚಲಾಯಿಸುತ್ತಿದ್ದರು. ವಿಶ್ವವಿದ್ಯಾಲಯ ಕಟ್ಟುವ ಸಂದರ್ಭದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ಯುಜಿಸಿಯಿಂದ ಮನ್ನಣೆ ದೊರೆಯಲು ಮಹತ್ವದ ಪಾತ್ರ ವಹಿಸಿದ್ದ ಡಾ. ಕರೀಗೌಡರು ಪ್ರಸಾರಾಂಗಕ್ಕೆ ಭದ್ರಬುನಾದಿ ಹಾಕಿದವರಾಗಿದ್ದಾರೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥ ಡಾ. ಮೋಹನ್ ಕುಂಟಾರ್ ಮಾತನಾಡಿ, ಡಾ. ಕರೀಗೌಡ ಬೀಚನಹಳ್ಳಿ ಹೊಸ ಪೀಳಿಗೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.
ಭಾಷಾ ನಿಕಾಯದ ಡೀನ್ ಡಾ. ಪಾಂಡುರಂಗಬಾಬು, ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ. ಕೆ.ಎಂ. ಮೇತ್ರಿ, ಪ್ರಸಾರಾಂಗದ ನಿರ್ದೇಶಕ ಡಾ. ಎಂ.ಸಿ. ಗಣೇಶ, ಉಪಕುಲಸಚಿವ ಡಾ. ಎ. ವೆಂಕಟೇಶ ಮುಂತಾದವರು ಡಾ. ಕರೀಗೌಡರ ಕುರಿತು ಅನುಭವ ಹಂಚಿಕೊಂಡರು. ಕತೆಗಾರ ಡಾ. ಕರೀಗೌಡ ಬೀಚನಹಳ್ಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ವ್ಯಕ್ತಿತ್ವ ಬೆಳೆಯಲು ವೇದಿಕೆಯಾದ ಕನ್ನಡ ವಿಶ್ವವಿದ್ಯಾಲಯವನ್ನು ಸ್ಮರಿಸಿಕೊಂಡು, ಉತ್ತಮ ಆಡಳಿತ ನಡೆಸಲು ದಕ್ಷತೆ, ಪ್ರಾಮಾಣಿಕತೆ ಮತ್ತು ಮಾನವೀಯತೆ ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.
---