ಸಮಾಜ ನಿರ್ಮಾಣಕ್ಕೆ ಮಹಿಳೆ ಪಾತ್ರ ಮುಖ್ಯ
ಬಳ್ಳಾರಿ: ಉತ್ತಮ ಸಮಾಜ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದು ಡಿಡಿಪಿಐ ಟಿ. ನಾರಾಯಣಗೌಡ ಅಭಿಪ್ರಾಯಪಟ್ಟರು. ಅಂತಾರಾಷ್ಟ್ರೀಯ ಬಾಲಕಿಯರ ದಿನಾಚರಣೆ ನಿಮಿತ್ತ ನಗರದ ಎಸ್.ಎನ್.ಪೇಟೆ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ಡಿಡಿಪಿಐ ಕಚೇರಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ, ನಂತರ ಅವರು ಮಾತನಾಡಿದರು. ಮಹಿಳೆಯರು ಸಬಲೀಕರಣಗೊಳ್ಳುವ ಜತೆಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಪ್ರಗತಿ ಸಾಧಿಸಬಹುದು. ತೊಟ್ಟಿಲ ತೂಗುವ ಕೈ ದೇಶವನ್ನು ಆಳುವ ಮಟ್ಟಕ್ಕೆ ಅಭಿವೃದ್ಧಿ ಹೊಂದುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖ ಎಂಬುದನ್ನು ಸಾಬೀತುಪಡಿಸಬೇಕು ಎಂದು ತಿಳಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಛಲಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ಜಿ.ಎಂ. ಸ್ವಾಮಿ, ಹಬೀಬಾ, ಪೂರ್ವ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಟಿ.ಎಂ. ಸಿದ್ದಲಿಂಗಮೂರ್ತಿ ಭಾಗವಹಿಸಿದ್ದರು. ಶಾಲೆಯ ಮುಖ್ಯಗುರು ಜೆ. ಮಲ್ಲಿಕಾರ್ಜುನ, ಸಹ ಶಿಕ್ಷಕಿ ಬಿಆರ್ಪಿ, ಸಿಆರ್ಪಿ ಇತರರಿದ್ದರು. ಎಂ.ಪಂಪಾಪತಿಗೌಡ ಸ್ವಾಗತಿಸಿದರು. ಆರ್. ಮೃತ್ಯುಂಜಯ ವಂದಿಸಿದರು.