ಸಿಂಡ್ ಬ್ಯಾಂಕ್ ಸಾಲ: ಬಡ್ಡಿದರಗಳ ಇಳಿಕೆ
ಬಳ್ಳಾರಿ: ಮುಂಬರುವ ಹಬ್ಬಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಸಿಂಡಿಕೇಟ್ ಬ್ಯಾಂಕ್ ಮನೆ ಹಾಗೂ ಇತರ ಸಾಲಗಳ ಮೇಲೆ ಬಡ್ಡಿ ದರಗಳನ್ನು ಇಳಿಕೆ ಮಾಡಿದೆ. ಎಲ್ಲ ತರಹದ ಗೃಹ ಸಾಲಗಳಿಗೆ ಅ. 9ರಿಂದ ಅನ್ವಯಿಸುವಂತೆ ಶೇ. 10.25ರ ದರದಲ್ಲಿ ಸಾಲ ನೀಡಲಿದೆ. ಕಾರ್ ಸಾಲಗಳ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿ ಶೇ. 10.90 ದರದಲ್ಲಿ ಹಾಗೂ ದ್ವಿಚಕ್ರ ವಾಹನಗಳ ಮೇಲಿನ ಬಡ್ಡಿದರವನ್ನು ಶೇ. 12.75ರಿಂದ ಶೇ. 12.25ಕ್ಕೆ ಇಳಿಸಿದೆ. ಗೃಹ ಹಾಗೂ ವಾಹನಗಳ ಸಾಲಗಳ ಮೇಲಿನ ಶುಲ್ಕಗಳ ದರವನ್ನು ಶೇ. 50ರಷ್ಟು ಕಡಿತಗೊಳಿಸಿದೆ. ಅತಿ ಸಣ್ಣ ಮತ್ತು ಸಣ್ಣ ಉದ್ಯಮಶೀಲರಿಗೆ ಕಡಿಮೆ ಸೇವಾ ಶುಲ್ಕ ವಿಧಿಸಿ ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸಾಲ ನೀಡಲಿದೆ. ಮಾಹಿತಿಗಾಗಿ ಸಮೀಪದ ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕರನ್ನು ಸಂಪರ್ಕಿಸಬೇಕೆಂದು ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ತಿಳಿಸಿದ್ದಾರೆ.
ಇಸ್ಪೀಟ್: ರು. 4500 ವಶ
ಬಳ್ಳಾರಿ: ಹೊಸಪೇಟೆ ತಾಲೂಕು ಡಾಣಾಪುರ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ರು. 4,500 ನಗದು ವಶಪಡಿಸಿಕೊಂಡಿದ್ದಾರೆ. ಸೋಮವಾರ ಡಾಣಾಪುರ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಂ.ಎಂ. ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹ ಪತ್ತೆ
ಹೊಸಪೇಟೆ: ತಾಲೂಕಿನ ಕಮಲಾಪುರದ ಎಚ್‌ಪಿಟಿ ಕಾಲುವೆಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಗದಗಿನ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮ್ಯಾನೇಜರ್ ನಾಗೇಂದ್ರ ಕುಲಕರ್ಣಿ (53) ಎಂದು ಗುರುತಿಸಲಾಗಿದೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ
ಹೊಸಪೇಟೆ: ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಂಪಿಯಲ್ಲಿ ಮಂಗಳವಾರ ನಡೆದಿದೆ. ಮೃತನ ಹೆಸರು, ವಿಳಾಸ ತಿಳಿದುಬಂದಿಲ್ಲ. ಹಂಪಿಯ ಅಚ್ಯುತ ದೇವಸ್ಥಾನದ ಹಿಂಭಾಗದ ಮಂಟಪದಲ್ಲಿ ತನ್ನ ಪಂಚೆಯಿಂದಲೇ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.