ಅರ್ಜಿ ಆಹ್ವಾನ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆಯಡಿ ವಾದ್ಯ ಪರಿಕರ ಮತ್ತು ವೇಷಭೂಷಣಗಳನ್ನು ನೀಡಲು ಅರ್ಹ ಅಸಂಘಟಿತ ಕಲಾವಿದರು, ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಗಿರಿಜನ ಉಪ ಯೋಜನೆಯಡಿ ಜಿಲ್ಲೆಯ ಪ್ರತಿ ತಾಲೂಕಿಗೆ ಒಂದರಂತೆ ಹಾಗೂ ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯ ಪ್ರತಿ ತಾಲೂಕಿಗೆ ಎರಡರಂತೆ ಅಸಂಘಟಿತ ಕಲಾವಿದರು ಹಾಗೂ ಸಂಘ ಸಂಸ್ಥೆಗಳಿಗೆ ವಾದ್ಯ ಪರಿಕರ ಹಾಗೂ ವೇಷಭೂಷಣಗಳನ್ನು ನೀಡಲಾಗುವುದು. ಆಸಕ್ತರು ಅರ್ಜಿಯೊಂದಿಗೆ ತಮ್ಮ ಕಲಾ ಸೇವೆ ಬಗ್ಗೆ ವ್ಯಕ್ತಿ ಪರಿಚಯ ಮತ್ತು ಸೂಕ್ತ ದಾಖಲೆಗಳನ್ನು, ಪರಿಕರಗಳ ವಿವರಗಳನ್ನು ಹಾಗೂ ದೃಢೀಕರಿಸಿದ ಜಾತಿ ಪ್ರಮಾಣಪತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಸಂಘ, ಸಂಸ್ಥೆಗಳು ನೋಂದಣಿಯಾಗಿದ್ದು, 3 ವರ್ಷಗಳು ನಿರಂತರ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ನಡೆಸಿದ ಬಗ್ಗೆ ಪತ್ರಿಕಾ ತುಣುಕು, ಆಹ್ವಾನ ಪತ್ರಿಕೆ, ಫೋಟೋ ಮತ್ತು ಸಂಸ್ಥೆಯ ಪದಾಧಿಕಾರಿಗಳ ದೃಢೀಕರಿಸಿದ ಜಾತಿ ಪ್ರಮಾಣಪತ್ರ, ಮತ್ತಿತರ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಅ. 30ರೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಂಸ್ಕೃತಿಕ ಸಮುಚ್ಚಯ, ಡಾ. ರಾಜ್‌ಕುಮಾರ್ ರಸ್ತೆ, ಬಳ್ಳಾರಿ-583101 ಇವರಿಗೆ ಸಲ್ಲಿಸಬೇಕೆಂದು ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ದಿನಾಚರಣೆ
ಹೂವಿನಹಡಗಲಿ: ಪಟ್ಟಣದ ಕಾರ್ಮೆಲ್ ಸೇವಾ ಸದನದಲ್ಲಿ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಲಯ ಸರ್ಕಾರಿ ಅಭಿಯೋಜಕ ಜಗದೀಶ ಬಿಸೆರೊಟ್ಟಿ ಮಾತನಾಡಿ, ಅಭಿವೃದ್ಧಿಯ ನೆಪದಲ್ಲಿ ವೇಗದ ಜೀವನ ಅಳವಡಿಸಿಕೊಂಡಿರುವ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗುವಂತಹ ಪರಿಸ್ಥಿತಿ ಉಂಟಾಗಿದೆ. ಮಾನಸಿಕ ಅಸ್ವಸ್ಥರನ್ನು ಕಡೆಗಣಿಸದೆ ಮಾನವೀಯತೆ ದೃಷ್ಟಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ ಎಂದರು. ತಹಸೀಲ್ದಾರ್ ಎ.ಬಿ. ವಿಜಯಕುಮಾರ್ ಮಾತನಾಡಿ, ಮನುಷ್ಯನಿಗಿರುವ ಕಟ್ಟುಪಾಡುಗಳನ್ನು ಮೀರಿ ಯಾವುದೇ ವ್ಯಕ್ತಿ ಬೆಳೆಯಬಾರದು. ಮಾನಸಿಕ ಅಸ್ವಸ್ಥರ ಹಕ್ಕುಗಳನ್ನು ಸಾರ್ವಜನಿಕರು ಗೌರವಿಸುವಂತಾಗಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಎಂ. ಬಸವಲಿಂಗಸ್ವಾಮಿ ಮಾತನಾಡಿದರು. ನಿವೃತ್ತ ವೈದ್ಯಾಧಿಕಾರಿ ಡಾ. ಕೆ. ಮಲ್ಲಿಕಾರ್ಜುನಗೌಡ, ಬಿಆರ್‌ಸಿ ಸಂಪನ್ಮೂಲ ವ್ಯಕ್ತಿ ವಿ.ಎಚ್. ಯೇಸು ಉಪನ್ಯಾಸ ನೀಡಿದರು. ಸಿಸ್ಟರ್ ಐಡಾ, ಸಿಸ್ಟರ್ ಶಿಲ್ಪಾ, ವಕೀಲರಾದ ಅಟವಾಳಗಿ ಕೊಟ್ರೇಶ್, ಎಚ್. ಸುಜಾತಾ, ಎಸ್.ಎಚ್. ಛಬ್ಬಿ, ಕೆ. ಭಾಸ್ಕರ, ಜಿ. ಶಿವಕುಮಾರ ಉಪಸ್ಥಿತರಿದ್ದರು. ರಾಜೇಶ್ ಡಿಸೋಜ ಸ್ವಾಗತಿಸಿದರು. ರಮೇಶ ನಿರೂಪಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.