ಮೂಲ ಸೌಕರ್ಯ, ವೇತನ ಹೆಚ್ಚಳಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 16
ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಹಂಪಿಯಲ್ಲಿ ಬುಧವಾರ ವಿಶ್ವವಿಖ್ಯಾತ ಹಂಪಿಯ ವಿಜಯವಿಠಲ ದೇವಸ್ಥಾನದ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಟರಿ ಚಾಲಿತ ವಾಹನಗಳ ಚಾಲಕರು ಪ್ರತಿಭಟನೆ ನಡೆಸಿದರು.
ಭುವನೇಶ್ವರಿ ಬ್ಯಾಟರಿ ಚಾಲಿತ ವಾಹನ ಚಾಲಕರ ಸಂಘದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದ ಅವರು, 24 ಬ್ಯಾಟರಿ ಚಾಲಿತ ಎಲ್ಲ ವಾಹನಗಳಿಗೆ ಮಹಿಳೆಯರೆ ಚಾಲಕರಾಗಿದ್ದು, 24 ವಾಹನಗಳ ಪೈಕಿ 11 ವಾಹನಗಳು ಮಾತ್ರ ಚಾಲನೆಯಲ್ಲಿವೆ. ಉಳಿದ ವಾಹನಗಳು ದುರಸ್ತಿಯಲ್ಲಿವೆ. 11 ವಾಹನಗಳಲ್ಲಿ ಎರಡು ಶಿಫ್ಟ್ ಮಾಡಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನಕ್ಕೆ 6 ವಾಹನಗಳು ಮತ್ತು ಮಧ್ಯಾಹ್ನದಿಂದ ಸಂಜೆವರೆಗೆ 6 ವಾಹನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಹಂಪಿಗೆ ಬರುವ ಪ್ರವಾಸಿಗರಿಗೆ ಬ್ಯಾಟರಿ ಚಾಲಿತ ವಾಹನಗಳಲ್ಲಿ ಹೋಗಿ ಸ್ಮಾರಕಗಳನ್ನು ವೀಕ್ಷಿಸಿ ಬರುವುದು ಕಷ್ಟವಾಗಿದೆ. ಇರುವ 6 ವಾಹನಗಳು ಬಿಡುವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಹೀಗಾಗಿ ತಮಗೆ ಹೆಚ್ಚು ವೇತನ ನೀಡಬೇಕು ಎಂದು ಚಾಲಕರು ಒತ್ತಾಯಿಸಿದರು.
ಸೌಲಭ್ಯವಿಲ್ಲ: ಮಹಿಳಾ ಚಾಲಕರಿಗೆ ಒಂದು ವ್ಯವಸ್ಥಿತ ಶೌಚಾಲಯವಿಲ್ಲ. ಕುಡಿಯುವ ನೀರಿನ ಸೌಲಭ್ಯವಿಲ್ಲ. ಶಿಫ್ಟ್ನಲ್ಲಿ ಕಾರ್ಯನಿರ್ವಹಿಸಿದ ಮಹಿಳೆಯರು ಮಧ್ಯಾಹ್ನ ಮತ್ತು ಸಂಜೆ ವಿಜಯವಿಠಲ ದೇವಸ್ಥಾನದಿಂದ ಕಮಲಾಪುರಕ್ಕೆ ನಡೆದು ಹೋಗಬೇಕಾಗಿದೆ. ಕಮಲಾಪುರಕ್ಕೆ ಹೋಗಲು ಯಾವುದೇ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ಮಹಿಳಾ ಚಾಲಕರಿಗೆ ಕಮಲಾಪುರಕ್ಕೆ ಹೋಗಲು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಚಾಲಕರ ಪ್ರತಿಭಟನೆಯಿಂದಾಗಿ ವಿಜಯವಿಠಲ ದೇವಸ್ಥಾನಕ್ಕೆ ಬುಧವಾರ ಬ್ಯಾಟರಿ ಚಾಲಿತ ವಾಹನಗಳ ಸಂಚಾರ ಇರಲಿಲ್ಲ. ಇದರಿಂದಾಗಿ ಹಂಪಿಗೆ ಬಂದಿದ್ದ ಪ್ರವಾಸಿಗರು ಹಾಗೂ ಭಕ್ತರು ವಿಜಯವಿಠಲ ದೇವಸ್ಥಾನದಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗಾಗಿ ಕಾಯದೆ ತಮ್ಮ ವಾಹನಗಳನ್ನು ದೇವಸ್ಥಾನದವರೆಗೂ ತೆಗೆದುಕೊಂಡು ಹೋಗಿ ಸ್ಮಾರಕಗಳನ್ನು ವೀಕ್ಷಿಸಿದರು. ಅನೇಕ ಕಾರುಗಳು, ಆಟೋಗಳು ಸೇರಿದಂತೆ ಇತರೆ ವಾಹನಗಳು ದೇವಸ್ಥಾನದ ಆವರಣದ ಗೋಡೆಗಳ ಪಕ್ಕದಲ್ಲೇ ಸಾಲುಗಟ್ಟಿ ನಿಂತಿದ್ದವು.
ಭರವಸೆ ಬಳಿಕ ಸೇವೆ: ಬ್ಯಾಟರಿ ಚಾಲಿತ ವಾಹನಗಳ ಚಾಲಕರು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದ ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಕೆಲ ಬೇಡಿಕೆಗಳನ್ನು ಅತಿ ಶೀಘ್ರದಲ್ಲೇ ಈಡೇರಿಸುವ ಭರವಸೆ ನೀಡಿದ ನಂತರ ಬ್ಯಾಟರಿ ಚಾಲಿತ ವಾಹನಗಳ ಸೇವೆಯನ್ನು ಚಾಲಕರು ಆರಂಭಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ಚಾಲಕರಾದ ಶ್ವೇತಾ, ತಿಪ್ಪಮ್ಮ, ರಾಧಾ, ರಾಜೇಶ್ವರಿ ಸೇರಿದಂತೆ 24 ಚಾಲಕರು ಪಾಲ್ಗೊಂಡಿದ್ದರು.