ರಾಷ್ಟ್ರಭಕ್ತಿ, ಸೇವಾ ಮನೋಭಾವ ಬೆಳೆಸಿಕೊಳ್ಳಿ
ಬಳ್ಳಾರಿ: ವಿದ್ಯಾರ್ಥಿಗಳು ರಾಷ್ಟ್ರಭಕ್ತಿ, ನಿಷ್ಠೆ, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ವೀವಿ ಸಂಘದ ಗೌರವ ಕಾರ್ಯದರ್ಶಿ ಗುರುಸಿದ್ದಯ್ಯಸ್ವಾಮಿ ತಿಳಿಸಿದರು.
ನಗರದ ಶೆಟ್ರು ಗುರುಶಾಂತಪ್ಪ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಸೇವಾ ಮನೋಭಾವನೆ ಹೊಂದುವುದು ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿ ಪರಿಸರ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಜತೆಗೆ ಈ ಶಿಬಿರದಲ್ಲಿ ಸ್ವಚ್ಛತೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ವೀವಿ ಸಂಘದ ಜಂಟಿ ಕಾರ್ಯದರ್ಶಿ ನೇಪಾಕ್ಷಪ್ಪ ಮಾತನಾಡಿದರು. ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಗ್ರಾಮ ನೈರ್ಮಲೀಕರಣ, ಸಾರ್ವಜನಿಕ ಆರೋಗ್ಯ ತಪಾಸಣೆ, ಸಾಕ್ಷರತೆ ಮಹತ್ವ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಎಂ. ಸಿದ್ದಲಿಂಗಸ್ವಾಮಿ, ಆರ್. ಶರಣಗೌಡ, ಕಾಲೇಜು ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಕೆ.ಎನ್. ಬಸವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಪಿ. ಬಸವನಗೌಡ ಸ್ವಾಗತಿಸಿದರು. ಡಾ. ಸಂಪಿಗೆ ನಾಗರಾಜ ನಿರೂಪಿಸಿದರು. ಬಿ. ಪಂಚಾಕ್ಷರಪ್ಪ ವಂದಿಸಿದರು.