ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ ತಾಲೀಮು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 17
ಹೈದರಾಬಾದ್ ಕರ್ನಾಟಕ 371 ಜೆ ಕಲಂ ತಿದ್ದುಪಡಿ ಅನುಷ್ಠಾನ ತಾರ್ಕಿಕ ಅಂತ್ಯ ಕಂಡಿದ್ದು, ಇದೀಗ ಮೊದಲ ಬಾರಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಎದುರಾಗಲಿದೆ. ಹೈ-ಕ ಜಿಲ್ಲೆಗಳ ವ್ಯಾಪ್ತಿಯ ಚುನಾವಣೆ ಇದಾಗಿರುವುದರಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ ಇಡುವುದೇ ಎಂಬ ಕುತೂಹಲ ಮೂಡಿಸಿದೆ.
ಚುನಾವಣೆ ಆರೇಳು ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ಗಾಗಿ ಆಯಾ ಪಕ್ಷದ ಹಿರಿಯ ಮುಖಂಡರು ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಈ ಆಕಾಂಕ್ಷಿಗಳು ಶಿಕ್ಷಕ ಮತದಾರರಲ್ಲಿ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯಕ್ಕೂ ಮುಂದಾಗುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ಯಾದಗಿರಿ, ರಾಯಚೂರು ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಭಾಗಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಕೆಲ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿದೆ. ಅವರೆಲ್ಲ ಪಕ್ಷಗಳ ಮುಖಂಡರ ಮನವೊಲಿಸುತ್ತಿದ್ದು, ಪಕ್ಷವು ಗ್ರೀನ್ ಸಿಗ್ನಲ್ ನೀಡಿದರೆ, ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವ ತರಾತುರಿಯಲ್ಲಿದ್ದಾರೆ.
ಪ್ರಬುದ್ಧ ಮತದಾರರ ಚುನಾವಣೆ: ಹೈದರಾಬಾದ್ ಕರ್ನಾಟಕ (ಹರಪನಹಳ್ಳಿ ತಾಲೂಕು ಸೇರಿದಂತೆ) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಶಾಲಾ-ಕಾಲೇಜುಗಳ ಶಿಕ್ಷಕರು ಮತದಾರರಾಗಿದ್ದು, ಚುನಾವಣೆಯು ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿರದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕನಿಷ್ಠವೆಂದರೂ ನಾಲ್ಕೈದು ತಿಂಗಳು ಕಾಲ ಪ್ರಚಾರ ಮಾಡಬೇಕಾದ ಅನಿ ವಾರ್ಯತೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಚುನಾವಣೆಯನ್ನು ಯಾವ ರೀತಿಯಾಗಿ ಎದುರಿಸಬೇಕು ಎಂಬುದನ್ನು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಹೊರಗಡೆ ಬರುತ್ತಿರುವ ಆಕಾಂಕ್ಷಿಗಳು: ಬಿಜೆಪಿ ವತಿಯಿಂದ ಶಶೀಲ್ ನಮೋಶಿ ಅವರು ಆಕಾಂಕ್ಷಿಯಾಗಿದ್ದರೆ, ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಬಳ್ಳಾರಿಯ ಕೆ.ಎಂ. ಮಹೇಶ್ವರಸ್ವಾಮಿ, ಗುಲ್ಬರ್ಗದ ಬಿರಾದಾರ್, ತಿಮ್ಮಯ್ಯ ಪುರ್ಲಿ ಆಕಾಂಕ್ಷಿಯಾಗಿದ್ದು, ಶರಣಪ್ಪ ಮಟ್ಟೂರು ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ಯಾವ ಪಕ್ಷದಿಂದ ಎಂಬುದು ಕುತೂಹಲ ಮೂಡಿಸಿದೆ. ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಪ್ರೊ. ಎಂ.ಬಿ. ಅಂಬಲಗಿ ಅವರು ಈ ಬಾರಿ ಜೆಡಿಎಸ್ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇವರೆಲ್ಲರೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಮುಂದಿಟ್ಟುಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ದಿನ ಕಳೆದಂತೆ ಆಕಾಂಕ್ಷಿಗಳು ಸಂಖ್ಯೆ ಏರಿಕೆಯಾಗಲಿದೆ.
ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ?: ಈಶಾನ್ಯ ಶಿಕ್ಷಕರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಶಶೀಲ್ ನಮೋಶಿ ಅವರೇ ಮೂರು ಬಾರಿ ಜಯಗಳಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಕ್ಷೇತ್ರದಲ್ಲಿ ಗೆಲವು ಸಾಧಿಸಬೇಕೆಂಬ ಇಚ್ಛೆಯಿಂದ ಚುನಾವಣೆಗೆ ಧುಮಕಲಿದೆ. ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ ಇಡುವುದೇ ಎಂಬ ಕುತೂಹಲ ಇದೆ.
ಇನ್ನು ಶಿಕ್ಷಕರು ಪ್ರಬುದ್ಧ ಮತದಾರರು ಆಗಿರುವುದರಿಂದ, ಈಗಾಗಲೇ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಶಿಕ್ಷಕರ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಕಾಂಕ್ಷಿಗಳು ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕಳೆದ ಬಾರಿಯ ಮತದಾರರ ಹೆಸರುಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಹೊಸ ಮತದಾರರ ನೋಂದಣಿಗೆ ಅವಕಾಶ ಮಾಡಿಕೊಟ್ಟಿದೆ. ಆರು ಜಿಲ್ಲೆಗಳಲ್ಲಿ ಅಂದಾಜು 16 ಸಾವಿರ ಮತದಾರರಿದ್ದಾರೆ.
ಶಶಿಧರ ಮೇಟಿ