ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಠಾಣೆ ಮೆಟ್ಟಿಲೇರಿದ ಕೆರೆ ಟೆಂಡರ್

Mainashree
Updated On : 18 Oct 2013, 11:33 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 17
ಕೆರೆಗಳು ಹಳ್ಳಿ ಜನರ ಜೀವಾಳ, ಜನ ಜಾನುವಾರುಗಳಿಗೆ ಜೀವಜಲ ನೀಡುವ ನೈಸರ್ಗಿಕ ಸಂಪತ್ತು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳ, ಮೀನು ಸಾಕಾಣಿಕೆ, ನೀರಾವರಿ ಸೌಲಭ್ಯದಂತಹ ಹತ್ತು ಹಲವು ಜನೋಪಯೋಗಿ ಕೆರೆಗಳನ್ನು ಬೇಕಾಬಿಟ್ಟಿಯಾಗಿ ಟೆಂಡರ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ತಾಲೂಕಿನ ನಂದಿಹಳ್ಳಿ ಗ್ರಾಪಂ ವ್ಯಾಪ್ತಿಯ ಮುದೇನೂರು ಕೆರೆ ಸರಿ ಸುಮಾರು 274 ಎಕರೆ ವಿಸ್ತೀರ್ಣ ಹೊಂದಿದೆ. ಈ ಕೆರೆಯನ್ನು ನಂದಿಹಳ್ಳಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಕೇವಲ ರು. 5 ಸಾವಿರಕ್ಕೆ ಟೆಂಡರ್ ನೀಡಿರುವ ಅಕ್ರಮ ಮಾಹಿತಿ ಹಕ್ಕಿನಡಿ ಮಾಹಿತಿ ಬಹಿರಂಗವಾಗಿದೆ. ಮಾಹಿತಿ ಪಡೆದಾಗ 2012ರಲ್ಲಿ ಮುದೇನೂರು ಕೆರೆ ಗ್ರಾಮದ ವ್ಯಕ್ತಿಯೋರ್ವನಿಗೆ ಟೆಂಡರ್ ನೀಡಲಾಗಿದೆ.
ಠಾಣೆಗೆ ದೂರು: ಕಳೆದ 3-4 ದಿನಗಳ ಹಿಂದೆ ಮುದೇನೂರು ಗ್ರಾಮಸ್ಥರು ಕೆರೆ ಟೆಂಡರ್‌ಗೆ ಆಗ್ರಹಿಸಿ ಕೆರೆಯಲ್ಲಿ ಮೀನಿನ ಮರಿಗಳನ್ನು ಬಿಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ದಾರೆ. ಇದನ್ನು ತಳ್ಳಿ ಹಾಕಲು ಅಕ್ರಮವಾಗಿ ಟೆಂಡರ್ ಪಡೆದಿರುವ ವ್ಯಕ್ತಿ ಗುರುವಾರ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ತಮಗೆ 2012ರಲ್ಲಿ ಮುದೇನೂರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ರು. 5 ಸಾವಿರಕ್ಕೆ ನಂದಿಹಳ್ಳಿ ಗ್ರಾಪಂ ಟೆಂಡರ್ ನೀಡಿದೆ. ಈಗಾಗಲೆ ಸಾಕಷ್ಟು ಮೀನಿನ ಮರಿಗಳನ್ನು ಬಿಟ್ಟಿದ್ದೇವೆ. ಈ ಮೀನುಗಳು ಸತ್ತರೆ ಅಥವಾ ಯಾವುದೇ ತೊಂದರೆ ಉಂಟಾದರೆ ಪ್ರತಿಭಟನೆ ಮಾಡಿದ್ದವರೇ ಕಾರಣ ಎಂದು ದೂರು ಸಲ್ಲಿಸಿದ್ದಾನೆ.
ಗ್ರಾಮಸ್ಥರ ಪ್ರತಿದೂರು: ಇದಕ್ಕೆ ಪ್ರತಿಯಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವ ಮಾಹಿತಿಯೊಂದಿಗೆ ಗ್ರಾಮಸ್ಥರು ದೂರು ನೀಡುತ್ತಾ, ನಂದಿಹಳ್ಳಿ ಗ್ರಾಪಂನಲ್ಲಿ ಯಾವುದೇ ಟೆಂಡರ್ ಆಗಿಲ್ಲ. ಕೆಲವರು ಕೆರೆಯ ಸಂಪತ್ತನ್ನು ದುರ್ಬಳಕೆ ಮಾಡಿಕೊಳ್ಳಲು ಸುಳ್ಳು ದಾಖಲೆಗಳನ್ನು ನೀಡಿದ್ದಾರೆಂದು ಪ್ರತಿದೂರಿನಲ್ಲಿ ತಿಳಿಸಿದ್ದಾರೆ.
ಕೆರೆ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೆ ನೀತಿ ನಿಯಮಗಳನ್ನು ಪಾಲನೆ ಮಾಡಿಲ್ಲ. ಜೂನ್, ಜುಲೈ ತಿಂಗಳಲ್ಲಿ ಮಾತ್ರ ಟೆಂಡರ್ ಮಾಡಬೇಕೆಂಬ ನಿಯಮವಿದೆ. ಟೆಂಡರ್ ಬಗ್ಗೆ ಪ್ರಚಾರ ಮಾಡಿಲ್ಲ. ಟೆಂಡರ್ ನಡೆಯುವಾಗ ಯಾವುದೆ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿಲ್ಲ. ಹೀಗೆ ಗ್ರಾಪಂ ವ್ಯಾಪ್ತಿಯ ಕೆರೆಗಳನ್ನು ಟೆಂಡರ್ ಮಾಡಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮೀನು ಸಾಕಾಣಿಕೆ ದಂಧೆ ನಡೆಸಿದ್ದಾರೆಂದು ಗ್ರಾಮಸ್ಥರು ದೂರುತ್ತಾರೆ.
ಕೆರೆ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುದೇನೂರು ಗ್ರಾಮಸ್ಥರು ದೂರು, ಪ್ರತಿದೂರುಗಳನ್ನು ಠಾಣೆಗೆ ನೀಡಿದ್ದಾರೆ. ಗ್ರಾಪಂ ಕಾರ್ಯದರ್ಶಿ ಅಥವಾ ಪಿಡಿಒರಿಂದ ಕೆರೆ ಟೆಂಡರ್ ಬಗ್ಗೆ ಆಗಿರುವ ಪ್ರಕ್ರಿಯೆ ಹಾಗೂ ಸೂಕ್ತ ದಾಖಲೆಗಳನ್ನು ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ಪೊಲೀಸ್ ಠಾಣೆ ಪಿಎಸ್‌ಐ ಆಂಜನೇಯ.
ಪರಿಶೀಲಿಸಿ ಕ್ರಮ: ಈ ಕುರಿತು ತಾಪಂ ಪ್ರಭಾರಿ ಇಒ ಡಿ. ಮಂಜಣ್ಣ ಇವರನ್ನು ಸಂಪರ್ಕಿಸಿದಾಗ, ಕೆರೆ ಟೆಂಡರ್ ಬಗ್ಗೆ ಇರುವ ಎಲ್ಲ ದಾಖಲೆಗಳನ್ನು ತಾಪಂ ಕಚೇರಿಗೆ ತರಲು ನಂದಿಹಳ್ಳಿ ಗ್ರಾಪಂ ಕಾರ್ಯದರ್ಶಿ, ಪಿಡಿಒಗೆ ತಿಳಿಸಲಾಗಿದೆ. ಅವುಗಳನ್ನು ಪೂರ್ಣ ಪರಿಶೀಲನೆ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ.
ಒಟ್ಟಾರೆ ಕೆರೆ ಟೆಂಡರ್ ಪ್ರಕ್ರಿಯೆಯ ಅಕ್ರಮ ಮಾಹಿತಿ ಹಕ್ಕಿನಡಿ ಬಯಲಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ ಅಥವಾ ಸಕ್ರಮವಾಗಿ ಆಗಿದೆಯೇ ಎಂಬುದು ತಾಪಂ ಇಒ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ತಿಳಿಯುತ್ತದೆ. ಆದರೆ ಗ್ರಾಮಸ್ಥರಿಂದ ಮಾತ್ರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿರುವುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement