ನಗರಾಭಿವೃದ್ಧಿ ಆಯುಕ್ತರ ವರ್ಗಾವಣೆಗೆ ತಡೆ
ಬೆಂಗಳೂರು: ಬಳ್ಳಾರಿಯ ನಗರಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಖಾಜಿ ನಫೀಸಾ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ವರ್ಗಾವಣೆ ಆದೇಶ ಪ್ರಶ್ನಿಸಿ ಖಾಜಿ ನಫೀಸಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಮೋಹನದಾಸ್ ಹಾಗೂ ನ್ಯಾ.ಇಂದ್ರಕಲಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ನಿಯಮದ ಪ್ರಕಾರ, ಕೆಎಎಸ್ ಅಧಿಕಾರಿಗಳು ಒಂದು ಸ್ಥಳದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನಂತರವಷ್ಟೇ ವರ್ಗಾವಣೆ ಮಾಡಬೇಕು. ಆದರೆ, ಸರ್ಕಾರ ಈ ನಿಯಮವನ್ನು ಗಾಳಿಗೆ ತೂರಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ವಿವಾದವೇನು?: ಬಳ್ಳಾರಿ ನಗರ ಅಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾಗಿ 2013ರ ಫೆಬ್ರವರಿ 2ರಂದು ನಫೀಸಾ ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ, ಸೆ.11ರಂದು ಅವರನ್ನು ಕೆಯುಐಡಿಎಫ್ಸಿಯ ಉಪ ಯೋಜನಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಫೀಸಾ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ)ಯ ಮೊರೆ ಹೋಗಿದ್ದರು. ಆದರೆ, ಅವರು ಆಯುಕ್ತರ ಹುದ್ದೆಗೆ ಸಮರ್ಥರಾಗಿಲ್ಲ ಎಂದು ಅಭಿಪ್ರಾಯಪಟ್ಟ ಕೆಎಟಿ ಸರ್ಕಾರಿ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.