ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ
ಕೊಟ್ಟೂರು: ರೈತರು ಬೆಳೆದ ಮೆಕ್ಕೆಜೋಳದ ಬೆಲೆ ಪ್ರಪಾತದತ್ತ ಸಾಗಿದ್ದು, ರೈತರ ರಕ್ಷಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು. ಸಂಪೂರ್ಣ ಮಳೆಯಾಶ್ರಿತ ಕೊಟ್ಟೂರಿನಂತಹ ಪ್ರದೇಶಗಳ ರೈತರು ವ್ಯಾಪಕ ಮೆಕ್ಕೆಜೋಳ ಬೆಳೆದಿದ್ದು, ಇಲ್ಲಿ ಒಂದು ಖರೀದಿ ಕೇಂದ್ರವನ್ನು ಸರ್ಕಾರ ಕೂಡಲೇ ತೆರೆಯಬೇಕು ಎಂದು ರೈತರಾದ ಕೆ.ಎಂ. ಕೊಟ್ರೇಶ್, ಬಿ. ನಾಗಭೂಷಣ ಮತ್ತಿತರರು ಒತ್ತಾಯಿಸಿದ್ದಾರೆ. ಶುಕ್ರವಾರ ಪಟ್ಟಣದಲ್ಲಿ ಮಾತನಾಡಿದ ಅವರು, ಕೃಷಿ ಅವಲಂಬನೆಯನ್ನೇ ಆಧಾರವಾಗಿರಿಸಿಕೊಂಡ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುಭಾಗ ಪ್ರದೇಶಗಳಲ್ಲಿ ಮೆಕ್ಕಜೋಳವನ್ನು ಗಣನೀಯವಾಗಿ ರೈತರು ಬೆಳೆಯುತ್ತಿದ್ದಾರೆ. ಈಗಾಗಲೇ ಕೆಲ ರೈತರ ಮೆಕ್ಕೆಜೋಳ ಬೆಳೆ ಮಾರಾಟಕ್ಕೆ ಸಿದ್ಧಗೊಂಡಿವೆ. ಮುಂದಿನ ತಿಂಗಳಿನಿಂದ ಮತ್ತಷ್ಟು ಬಗೆಯಲ್ಲಿ ಮೆಕ್ಕೆಜೋಳ ಬೆಳೆ ಮಾರುಕಟ್ಟೆಗೆ ಬರುತ್ತದೆ. ಈ ಹಂತದಲ್ಲಿ ಕ್ವಿಂಟಲ್ ಮೆಕ್ಕೆಜೋಳ ಕೇವಲ ರು. 1000ಕ್ಕೆ ಖರೀದಿಯಾಗುತ್ತಿದೆ. ಈ ಬೆಲೆ ಕಷ್ಟಪಟ್ಟು ಬೆಳೆದ ರೈತರನ್ನು ಸಂಕಷ್ಟಕ್ಕೆ ಈಡುಮಾಡುತ್ತಿದೆ. ಕನಿಷ್ಠ ರು. 2000 ಬೆಂಬಲ ಬೆಲೆ ಘೋಷಿಸುವ ಮೂಲಕ ಸರ್ಕಾರ ಮೆಕ್ಕೆಜೋಳವನ್ನು ಖರೀದಿ ಮಾಡುವತ್ತ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಕೊಟ್ಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮತ್ತು ಹತ್ತಿ ಖರೀದಿ ಭರಾಟೆ ನಿರಂತರ ನಡೆಯುತ್ತಿದೆ. ಈ ಮಾರುಕಟ್ಟೆಯನ್ನು ಜಿಲ್ಲೆಯ ಪಶ್ಚಿಮ ತಾಲೂಕಿನ ಬಹುತೇಕ ರೈತರು ಆಶ್ರಯ ಮಾಡಿಕೊಂಡಿದ್ದಾರೆ. ಈ ಸ್ಥಳದಲ್ಲಿಯೇ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.