ಯಂತ್ರಗಳ ಬಿಡಿಭಾಗ ಕಳ್ಳತನ: ಇಬ್ಬರ ಬಂಧನ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಅ. 18
ಬತ್ತದ ಪೈರನ್ನು ಕತ್ತರಿಸುವ ಹಾರ್ವೆಸ್ಟ್ ಯಂತ್ರಗಳ ಭಾಗಗಳನ್ನು ಕದ್ದು ಸಾಗಿಸಲೆತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ರು. 1,90,600 ಬೆಲೆ ಬಾಳುವ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಇಲ್ಲಿಗೆ ಸಮೀಪದ ನಂ.3 ಸಣಾಪುರ ಗ್ರಾಮ ಹತ್ತಿರದ ನಾರಾಯಣಸ್ವಾಮಿ ಕ್ಯಾಂಪ್ನ ವೈ. ಶ್ರೀನಿವಾಸುಲು ಇವರ ಬತ್ತದ ಪೈರನ್ನು ಕತ್ತರಿಸುವ ಹಾರ್ವೆಸ್ಟ್ ಯಂತ್ರ ಗದ್ದೆಯಲ್ಲಿದ್ದು, ಅ. 14ರ ರಾತ್ರಿ, ಹಾರ್ವೆಸ್ಟ್ ಯಂತ್ರದ ಕೆಲ ಬಿಡಿ ಭಾಗಗಳು ಕಣ್ಮರೆಯಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ವೈ. ಶ್ರೀನಿವಾಸುಲು ಅ. 15ರಂದು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅನಂತರ ಆರೋಪಿಗಳ ಪತ್ತೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್, ಹೆಚ್ಚುವರಿ ಅಧೀಕ್ಷಕ ಸಿ.ಕೆ. ಬಾಬಾ, ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ಮಾರ್ಗದರ್ಶನದಲ್ಲಿ ಸಿಪಿಐ ಆರ್.ಹನುಮಂತಪ್ಪ ಪತ್ತೆಗೆ ಮುಂದಾಗಿದ್ದರು. ಗುರುವಾರ ಬೆಳಗಿನ ಜಾವ ಕಮ್ಮ ಭವನದ ಬಳಿ ಅನುಮಾನಸ್ಪದವಾಗಿ ವೇಗವಾಗಿ ಹೊರಟಿದ್ದ ಟಾಟಾ ಏಸ್ನ್ನು ನಿಲ್ಲಿಸಿ ವಿಚಾರಿಸಿದಾಗ ಕಳ್ಳತನ ಮಾಡಿದ 1,42,000 ಮೌಲ್ಯದ ಹೈಡ್ರೋಲಿಕ್ ಪಂಪ್ ಅಸೆಂಬ್ಲಿ, 36,000 ಮೌಲ್ಯದ ಎರಡು ಲಿವರ್ ಅಸೆಂಬ್ಲಿಗಳು, ರು. 5,800 ಮೌಲ್ಯದ ಅಮರಾನ್ ಕಂಪನಿಯ ಬ್ಯಾಟರಿ, 6,800 ಮೌಲ್ಯದ ಒಂದು ಎಸ್.ಎಫ್. ಸೊನಿಕ್ ಜಂಬೋ ಬ್ಯಾಟರಿ ಪತ್ತೆಯಾಗಿವೆ.
ವಿಚಾರಣೆ ಸಂದರ್ಭದಲ್ಲಿ ವೈ.ಶ್ರೀನಿವಾಸುಲು ಇವರ ಹಾರ್ವೆಸ್ಟ್ ಮಿಷನ್ನಿನ ಬಿಡಿ ಭಾಗಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡ ಟಾಟಾ ಏಸ್ ಚಾಲಕ ಭರತ್ ಹಾಗೂ ಖಲಂದರ್ ಇಬ್ಬರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪತ್ತೆಯ ಕಾರ್ಯಾಚರಣೆಗೆ ಪಿಎಸ್ಐ ಡಿ.ಹುಲುಗಪ್ಪ, ಕ್ರೈಮ್ ಪಿಎಸ್ಐ ದೊಡ್ಡಣ್ಣ, ಎಎಸ್ಐ ಲಕ್ಷ್ಮಣ, ಸಿಬ್ಬಂದಿ ಬೆಟ್ಟಪ್ಪ, ತಿಪ್ಪಣ್ಣ, ರವಿವರ್ಮ, ಸಣ್ಣ ಹನುಮಂತಮ್ಮ, ವಿಘ್ನೇಶ್ವರ, ಕುಮಾರಸ್ವಾಮಿ, ಪಿ. ಪಂಪಾಪತಿ, ನಂದೀಶ್ ಸಹಕರಿಸಿದ್ದಾರೆ.