ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಾಲ್ಮೀಕಿ ಮಹರ್ಷಿಗೆ ಮಹಾನಮನ

Mainashree
Updated On : 19 Oct 2013, 11:17 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 18
ಇಡೀ ಜಗತ್ತಿಗೆ ವಾಲ್ಮೀಕಿ ಮಹರ್ಷಿಗಳು ಆದರ್ಶಪ್ರಾಯವಾಗಿದ್ದು, ಅವರ ಉಪದೇಶ, ಚಿಂತನೆ, ರಾಮಾಯಣ ಕಾವ್ಯದಲ್ಲಿನ ಸಂದೇಶ, ಸೂಕ್ತಿ ಮೌಲ್ಯಗಳನ್ನು ಪ್ರತಿಯೊಬ್ಬರೂ ಆಚರಿಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಜಿಲ್ಲಾಡಳಿತ, ಜಿಪಂ, ಬಳ್ಳಾರಿ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿಯಾಗಿ ಶುಕ್ರವಾರ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ  ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ, ಅನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿಗಳು ಅಂದಿನ ಕಾಲದಲ್ಲೆ ಮಾನವನ ನೈತಿಕ ಜೀವನ, ಆಚಾರ, ವಿಚಾರ, ಆಹಾರ, ವೈದ್ಯ ಪದ್ಧತಿಗಳ ಕುರಿತು ಪ್ರಸ್ತಾಪಿಸಿದ್ದರು. ಬುಡಕಟ್ಟು ಜನಾಂಗ, ರಾಜ್ಯಗಳ ವ್ಯವಸ್ಥೆ, ಪುಷ್ಪಕ ವಿಮಾನ, ನೌಕೆ, ವಾನರ, ಗೆರಿಲ್ಲಾ ಯುದ್ಧಗಳ ಕುರಿತು ವಿವರಿಸಿರುವ ಮಹರ್ಷಿಗಳು, ಜಗದ ಜನಮನಗಳಲ್ಲಿ ಅವಿಸ್ಮರಣೀಯ ಸ್ಥಾನ ಕಲ್ಪಿಸಿಕೊಂಡಿದ್ದಾರೆ ಎಂದರು.
ರಾಮಾಯಣ ಅರ್ಥೈಸಿಕೊಳ್ಳಿ: ವಾಲ್ಮೀಕಿ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸುಕನ್ಯಾ ಮಾರುತಿ, ಮುಂದಿನ ತಲೆಮಾರಿನವರಿಗೆ ಹಾಗೂ ಯುವ ಜನಾಂಗಕ್ಕೆ ವಾಲ್ಮೀಕಿ ಪರಿಚಯವಾಗಬೇಕಿದೆ. ಜೀವನದ ನೈತಿಕ ಮೌಲ್ಯಗಳ ಕುರಿತು ಬರೆದ ರಾಮಾಯಣ ಕಾವ್ಯವನ್ನು ಓದಿ ಅರ್ಥೈಸಿಕೊಳ್ಳದೆ, ಅದನ್ನು ಬರೆದವರನ್ನು ಕೇವಲ ಪೂಜೆಗೆ ಸೀಮಿತಗೊಳಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ರಾಮಾಯಣ ಮಹಾಕಾವ್ಯವನ್ನು ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಅದರಲ್ಲಿನ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸಂಸದೆ ಜೆ. ಶಾಂತಾ ಮಾತನಾಡಿದರು. ಜಿಪಂ ಅಧ್ಯಕ್ಷೆ ಬೆಂಡಿಗೇರಿ ಶೋಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ತರಗತಿಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಇದಕ್ಕೂ ಮುನ್ನ ಸಚಿವ ಪರಮೇಶ್ವರ್ ನಾಯ್ಕ ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾದ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ವೃತ್ತ, ಮೋತಿ ವೃತ್ತ, ಸ್ಟೇಷನ್ ರಸ್ತೆ ಮೂಲಕ ಮರಳಿ ಕಾಲೇಜು ಮೈದಾನ ತಲುಪಿತು. ಉಪನ್ಯಾಸಕ ಗೋವಿಂದಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಎಸ್ಪಿ ಡಾ. ಚೇತನ್‌ಸಿಂಗ್ ರಾಥೋಡ್, ಜಿಪಂ ಸಿಇಒ ಮಂಜುನಾಥ ನಾಯಕ್, ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ, ಕಮಲಾ ಮರಿಸ್ವಾಮಿ, ಸದಾಶಿವಪ್ಪ, ರಾಮ್‌ಪ್ರಸಾದ್, ಪಾಲಿಕೆ ಸದಸ್ಯ ಬಿ. ಬಸವರಾಜ್, ಕೆರೆಕೋಡಪ್ಪ, ಆಂಜನೇಯಲು ಇದ್ದರು. ಯಲ್ಲನಗೌಡ ಶಂಕರಬಂಡೆ ಸಂಗಡಿಗರು ಪ್ರಾರ್ಥಿಸಿದರು. ಪರಿಶಿಷ್ಟ ವರ್ಗಗಳ ಜಿಲ್ಲಾ ಅಧಿಕಾರಿ ಪೋಲಯ್ಯ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement