ಕಮಲಾಪುರ ಬಂದ್ ಯಶಸ್ವಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 19
ಹೊಸಪೇಟೆಯ ಐಎಸ್ಆರ್ ಸಕ್ಕರೆ ಕಾರ್ಖಾನೆ ಕಾಯ್ದಿಟ್ಟ ಪ್ರದೇಶದಿಂದ ಮುಕ್ತಗೊಳಿಸಬೇಕು ಮತ್ತು ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಕಮಲಾಪುರ ರೈತ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ರೈತರು ಶನಿವಾರ ಕರೆ ನೀಡಿದ್ದ ಕಮಲಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕಮಲಾಪುರದ ರೈತ ಸಂಘದ ಅಧ್ಯಕ್ಷ ಎ. ಪ್ರಶಾಂತ್ ಸಿಂಗ್ ಮಾತನಾಡಿ, ಹೊಸಪೇಟೆಯ ಐಎಸ್ಆರ್ ಸಕ್ಕರೆ ಕಾರ್ಖಾನೆ ಸುಮಾರು 79 ವರ್ಷದ ಹಳೆಯ ಕಾರ್ಖಾನೆಯಾಗಿದ್ದು, ಕಾರ್ಖಾನೆ ಆಧುನೀಕರಣವಾಗಿಲ್ಲ. ಪ್ರತಿದಿನ ಸುಮಾರು 1600-1700 ಟನ್ ಮಾತ್ರ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಸುಮಾರು 6 ಲಕ್ಷ ಟನ್ ಕಬ್ಬು ಬೆಳೆದಿದ್ದು, ಈ ಎಲ್ಲ ಕಬ್ಬನ್ನು ನುರಿಸುವ ಸಾಮರ್ಥ್ಯ ಐಎಸ್ಆರ್ ಸಕ್ಕರೆ ಕಾರ್ಖಾನೆಗಿಲ್ಲ. ಹೀಗಾಗಿ, ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಐಎಸ್ಆರ್ ಸಕ್ಕರೆ ಕಾರ್ಖಾನೆಯ ಕಾಯ್ದಿಟ್ಟ ಪ್ರದೇಶದಿಂದ ರೈತರನ್ನು ಮುಕ್ತಗೊಳಿಸಬೇಕು. ಅಲ್ಲದೆ, ಕಬ್ಬನ್ನು ಬೇರೆ ಕಡೆಗೆ ಸಾಗಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ವಂಚನೆ: ರೈತ ಸಂಘದ ಉಪಾಧ್ಯಕ್ಷ ಎಸ್. ಶಮೀವುಲ್ಲಾ ಮಾತನಾಡಿ, 2002-03 ಮತ್ತು 2003-04ನೇ ಸಾಲಿನ ಕಾರ್ಖಾನೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಶಾಸನಬದ್ಧ ಕಬ್ಬಿನ ಕನಿಷ್ಠ ಬೆಲೆಗಿಂತ (ಎಸ್ಎಂಪಿ) ಕಡಿಮೆ ಬೆಲೆ ನೀಡಿ ವಂಚಿಸಿದೆ. ಇದೇ ರೀತಿ 2006-07ನೇ ಸಾಲಿಗೆ ಹಾಗೂ 2007-08ನೇ ಸಾಲಿಗೆ ಕರ್ನಾಟಕ ಸರ್ಕಾರದಿಂದ ತೆರಿಗೆ ರಿಯಾಯಿತಿ, ಆರ್ಥಿಕ ರಿಯಾಯಿತಿ ಪಡೆದು ಪ್ರತಿ ಟನ್ಗೆ ರು. 160ಯನ್ನು ರೈತರಿಗೆ ನೀಡಿಲ್ಲ. ಸರ್ಕಾರದ ಆದೇಶದ ಪ್ರಕಾರ ರೈತರಿಗೆ ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಎನ್. ಓಬಯ್ಯ, ನಗರಸಭಾ ಸದಸ್ಯ ಮುಕ್ತಿಯಾರ್ ಪಾಷಾ ಮುಂತಾದವರು ಮಾತನಾಡಿದರು. ರೈತ ಸಂಘದ ಉಪಾಧ್ಯಕ್ಷ ಡಿ. ಗೋವಿಂದರಾವ್, ಕಾರ್ಯದರ್ಶಿ ಕೆ.ಪಿ. ಪಾಂಡುರಂಗರಾವ್, ಜಂಟಿ ಕಾರ್ಯದರ್ಶಿ ಎ. ಅಶ್ವತ್ ಸಿಂಗ್, ಮುಖಂಡರಾದ ಡಿ. ನೂರುಸಾಬ್, ನಾಗೇಂದ್ರಶೆಟ್ಟಿ, ಕರ್ಣಂ ವೆಂಕಟೇಶ್, ಸತ್ಯನಾರಾಯಣರಾವ್, ಷಡಕ್ಷರಿ, ಅಂಗಡಿ ನಾಗರಾಜ್, ವಿನಾಯಕ ಸ್ವಾಮಿ, ರಾಮಸ್ವಾಮಿ, ನಾಗಯ್ಯ, ಜೋಗಯ್ಯ, ಕಾಳಪ್ಪ, ನೂರುಲ್ಲಾ ಖಾದ್ರಿ, ಕಮಲಾಪುರ, ಹಂಪಿ, ಕಡ್ಡಿರಾಂಪುರ, ವೆಂಕಟಾಪುರ, ಸೀತಾರಾಂ ತಾಂಡಾ, ಕೆರೆ ತಾಂಡಾ ಸೇರಿದಂತೆ ಸುತ್ತಮುತ್ತಲಿನ ರೈತರು ಹಾಗೂ ಮುಖಂಡರು ಬಂದ್ನಲ್ಲಿ ಭಾಗವಹಿಸಿದ್ದರು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಅಂಗಡಿ-ಮುಂಗಟ್ಟುಗಳು ವಹಿವಾಟು ಸ್ಥಗಿತಗೊಳಿಸಿದ್ದವು. ಮಧ್ಯಾಹ್ನದ ವರೆಗೆ ಹೊಸಪೇಟೆಯಿದ ಕಂಪ್ಲಿ, ಗಂಗಾವತಿಗೆ ಹೋಗುವ ಎಲ್ಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ರಮೇಶ ಕೋನರಡ್ಡಿ, ಎಸಿ ಸುನೀಲ್ ಕುಮಾರ್ ಭೇಟಿ ನೀಡಿದ್ದರು.