ವಾಲ್ಮೀಕಿ ಆದರ್ಶ ಇಂದಿಗೂ ಪ್ರಸ್ತುತ: ತಹಸೀಲ್ದಾರ್
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಅ. 19
ವಾಲ್ಮೀಕಿಯವರ ಆದರ್ಶಗಳು ಕೇವಲ ಒಂದು ಜನಾಂಗಕ್ಕೆ ಮಾತ್ರ ಸೀಮಿತವಲ್ಲ, ಎಲ್ಲಾ ವರ್ಗಗಳ ಜನರ ಉತ್ತಮ ಜೀವನಕ್ಕೆ ಅವರ ವಿಚಾರ ಹಾಗೂ ಅದರ್ಶಗಳು ಇಂದಿಗೂ ಅವಶ್ಯಕತೆ ಇದೆ ಎಂದು ತಹಸೀಲ್ದಾರ್ ಟಿ.ಜಿ. ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಅವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಸವರಾಜ ಮಾತನಾಡಿದರು.
ಇದಕ್ಕೂ ಮುನ್ನ ಶಾಸಕ ಬಿ.ಎಂ. ನಾಗರಾಜ ವಾಲ್ಮೀಕಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ವಾಲ್ಮೀಕಿ ಭಾವಚಿತ್ರವನ್ನು ತಾಲೂಕು ಕ್ರೀಡಾಂಗಣದಿಂದ ಅಂಬೇಡ್ಕರ್ ವೃತ್ತದವರೆಗೆ ವಾದ್ಯ ಮೇಳಗಳೊಂದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಅಂಬಮ್ಮ, ಜಿ.ಪಂ. ಸದಸ್ಯರಾದ ಸರಸ್ಪತಿ, ನಾಗರತ್ನಮ್ಮ, ವಾಲ್ಮೀಕಿ ಸಂಘದ ಗೌರವಾಧ್ಯಕ್ಷ ವೆಂಕೋಬಣ್ಣ, ತಾಲೂಕು ವಾ.ಮ. ಅಧ್ಯಕ್ಷ ಹೊನ್ನಪ್ಪ ಇತರರು ಇದ್ದರು.
ವಿವಿಧೆಡೆ ಜಯಂತಿ ಆಚರಣೆ: ತಾಲೂಕಿನ ಕುರಿಗನೂರು ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಅನಂತರ ಗ್ರಾಮದ ಎಲ್ಲಾ ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಕೆ. ಮುದುಕಪ್ಪ, ಜಿ. ರಮೇಶ ಇತರರು ಇದ್ದರು. ತಾಲೂಕಿನ ಕರೂರು, ಹಳೇಕೋಟೆ ಗ್ರಾಮಗಳಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.