ಸಂಡೂರು: ಸರಣಿ ಕಳ್ಳತನ
ಸಂಡೂರು: ತಾಲೂಕಿನ ಕೃಷ್ಣನಗರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಎರಡು ಕಡೆ ಚಿನ್ನ, ಬೆಳ್ಳಿ ಆಭರಣ, ನಗದು ಹಾಗೂ ಇತರ ಸಾಮಾನುಗಳನ್ನು ಕಳವು ಮಾಡಲಾಗಿದೆ. ಕೃಷ್ಣನಗರ ಗ್ರಾಮದ ಶಾಂತಮೂರ್ತಿ ಎಂಬವರು ಶುಕ್ರವಾರ ರಾತ್ರಿ ಮನೆಯ ಮೇಲೆ ಮಲಗಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಸುಮಾರು 9 ತೊಲೆ ಬಂಗಾರದ ಆಭರಣಗಳು, 3 ಜೊತೆ ಬೆಳ್ಳಿ ದೀಪಗಳು, ರು. 1 ಲಕ್ಷ ನಗದು, 3 ಮೊಬೈಲ್ ಪೋನ್ ಮತ್ತು ರು. 10 ಸಾವಿರ ಬೆಲೆಬಾಳುವ 1 ರೇಬಾನ್ ಕಂಪನಿಯ ಕನ್ನಡಕ ದೋಚಲಾಗಿದೆ. ಅದೇ ಗ್ರಾಮದ ನಬೀಸಾಬ್ ಎಂಬವರು ಮನೆಗೆ ಬೀಗ ಹಾಕಿ ತೆರಳಿದ್ದಾಗ ಕಳ್ಳರು ಮನೆಗೆ ನುಗ್ಗಿ ಬೀರುವಿನಲ್ಲಿದ್ದ 10 ತೊಲೆ ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಾರೆ. ಹಾಗೆ ಮತ್ತೊಂದೆಡೆ ಮುದೆಸ್ವಾಮಿ ದೇವಸ್ಥಾನ (ಪೀರಲ ದೇವರ ಸಾಮಾನುಗಳನ್ನು ಇರುವ ದೇವಸ್ಥಾನ)ದ ಬೀಗ ಮುರಿಯಲಾಗಿದ್ದು, ಯಾವುದೇ ವಸ್ತುಗಳನ್ನು ಕಳವು ಮಾಡಲಾಗಿಲ್ಲ ಎಂದು ತಿಳಿದುಬಂದಿದೆ. ಇತರೆಡೆ ಮನೆಗೆ ಬೀಗ ಹಾಕಿ ಊರಿಗೆ ತೆರಳಿದ್ದ ಮೂರು ಮನೆಗಳ ಬೀಗ ಒಡೆಯಲಾಗಿದ್ದು, ಕಳ್ಳರು ಏನೇನು ದೋಚಿದ್ದಾರೆ ಎಂದು ತಿಳಿದುಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಸಂಡೂರು ಠಾಣೆ ಎಸ್ಐ ಸುರೇಶ್, ಸಿಬ್ಬಂದಿ ಮತ್ತು ಬಳ್ಳಾರಿಯ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಂತಮೂರ್ತಿ ಮಾತ್ರ ಠಾಣೆಗೆ ದೂರು ನೀಡಿದ್ದಾರೆ.