ಕುಸ್ತಿಪಟು ಪ್ರೇಮಾಗೆ ವಿಜಯನಗರ ಬೆಳ್ಳಿಗದೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 20
ಕುಸ್ತಿಗೆ ವಿಶೇಷ ಗೌರವ ನೀಡುವ ಜತೆಗೆ ಕುಸ್ತಿ ಕಲೆಯನ್ನು ಮತ್ತು ಕುಸ್ತಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕುಸ್ತಿ ಪಂದ್ಯಾವಳಿಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸಬೇಕು ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ವಿಜಯನಗರ ಕುಸ್ತಿ ಅಖಾಡ ಉತ್ಸಾಹಿ ನಾಯಕ ಸಂಘದಿಂದ ದಸರಾ ಹಬ್ಬದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ವಿಜಯನಗರ ಬಯಲು ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿ.ಕೆ. ಹನುಮಂತಪ್ಪ ಮಾತನಾಡಿ, ಹೊಸಪೇಟೆ ಕುಸ್ತಿ ಪಂದ್ಯಾವಳಿಯಲ್ಲಿ ದೇಶದಲ್ಲೆ ಪ್ರಖ್ಯಾತಿ ಹೊಂದಿದೆ. ಇಲ್ಲಿನ ಏಳು ಕೇರಿಯಲ್ಲಿರುವ ಪುರಾತನ ಹಾಗೂ ಪ್ರಖ್ಯಾತಿಯ ಗರಡಿ ಮನೆಗಳೆ ಇದಕ್ಕೆ ಜೀವಂತ ಸಾಕ್ಷಿ. ಯುವಕರು ಇಲ್ಲಿನ ಗರಡಿ ಮನೆಗಳಿಗೆ ತೆರಳಿ ಕುಸ್ತಿ ತಾಲೀಮು ನಡೆಸಿ ದೇಶದಲ್ಲೇ ಉತ್ತಮ ಹೆಸರು ಮಾಡಿದ ಕುಸ್ತಿಪಟುಗಳು ಆಗಿದ್ದಾರೆ. ಹೊಸಪೇಟೆಯ ಕುಸ್ತಿ ಪರಂಪರೆಯನ್ನು ಯುವಕರು ಮುಂದುವರೆಸಿಕೊಂಡು ಹೋಗುವ ಮೂಲಕ ರಾಷ್ಟ್ರೀಯ ಕುಸ್ತಿಪಟುಗಳಾಗಿ ಬೆಳೆಯಬೇಕು ಎಂದು ಹೇಳಿದರು.
ಸ್ಥಳೀಯ ಮುಖಂಡ ಶಾದಬ್ ವಹಾಬ್ ಮಾತನಾಡಿದರು. ಪತ್ತಿಕೊಂಡ ಕಿಶೋರ್, ನೆನಗಡ್ಲಿ ವೆಂಕೋಬಣ್ಣ, ಗೋಸಲ ಭರಮಪ್ಪ, ಕಲ್ಗುಡಿ ಭೀಮಪ್ಪ, ಗುಜ್ಜಲ್ ರಾಘವೇಂದ್ರ, ತಾರಿಹಳ್ಳಿ ವೆಂಕಟೇಶ್, ಕಣ್ಣಿ ಶ್ರೀಕಂಠ, ಪಿ. ವೆಂಕಟೇಶ್, ಗೋಸಲ ಮಂಜುನಾಥ, ಜಂಬಾನಹಳ್ಳಿ ರಾಮಾಂಜನಿ, ತಾರಿಹಳ್ಳಿ ಭೀಮಾ, ಗುಂಡಿ ರಮೇಶ್, ಜಿ. ವೆಂಕಟೇಶ್, ನಗರಸಭಾ ಸದಸ್ಯರಾದ ಗುಡಗುಂಟೆ ಮಲ್ಲಿಕಾರ್ಜುನ, ಗಿಂಜಿ ಮಂಜುನಾಥ, ಗೌಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರೇಮಾ ಪ್ರಥಮ: ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ಕುಸ್ತಿ ಕ್ರೀಡಾಪಟು ಪ್ರೇಮಾ ಉಚ್ಚಣ್ಣನವರ್ ಹಾಗೂ ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಶಾಯಿದಾ ಅವರ ಕುಸ್ತಿ ನೋಡುಗರನ್ನು ಬೆರಗುಗೊಳಿಸಿತು. ಪುರುಷ ಕುಸ್ತಿಪಟುಗಳಂತೆ ಗೆಲವಿಗಾಗಿ ಸಾಹಾಸ ಪ್ರದರ್ಶಿಸಿದರು. ಉತ್ತಮ ಪಟ್ಟುಗಳನ್ನು ತೋರಿದ ಪ್ರೇಮಾ ಉಚ್ಚಣ್ಣನವರ್ ಗೆಲವು ಸಾಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಬಾಗಲಕೋಟೆಯ ಕೃಷ್ಣ, ಹರಪ್ಪನಹಳ್ಳಿ ಸುರೇಶ್ ನಡುವೆ ಹಾಗೂ ಅನೇಕ ಹಿರಿಯ ಕುಸ್ತಿಪಟುಗಳು ತಮ್ಮ ಕುಸ್ತಿ ಪ್ರದರ್ಶನ ತೋರಿಸಿದರು. ಪ್ರಥಮ ಬಹುಮಾನವನ್ನು ಶಾದಬ್ ವಹಾಬ್ ವಿಜಯನಗರ ಬೆಳ್ಳಿಗದೆ ಆಡುವ ಪೈಲ್ವಾನವರಿಗೆ 1 ಕೆಜಿಯ ಬೆಳ್ಳಿಗದೆ ಹಾಗೂ ರು. 10 ಸಾವಿರ ನಗದು ಬಹುಮಾನ ವಿತರಿಸಿದರು. 2ನೇ ಬಹುಮಾನವನ್ನು ಪತ್ತಿಕೊಂಡ ಕಿಶೋರ್ ಅವರು ಅರ್ಧ ಕೆಜಿ ಬೆಳ್ಳಿಗದೆ ಹಾಗೂ ರು. 5 ಸಾವಿರ ನೀಡಿದರು. 3ನೇ ಬಹುಮಾನವನ್ನು ಗೋಸಲ ಮಂಜುನಾಥ ಅವರು 11 ತೊಲೆ ಬೆಳ್ಳಿ ಕಡಗ, ರು. 25 ಸಾವಿರ ಬಹುಮಾನ ವಿತರಿಸಿದರು. ಪಂದ್ಯಾವಳಿಯನ್ನು ನಗರ, ತಾಲೂಕಿನ ಜನತೆ ವೀಕ್ಷಿಸಿದರು.