ಭೂ ಮಾಪನ ಕಚೇರಿ ದಾಖಲೆಗೆ ಗೆದ್ದಲು
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 20
ಇಡೀ ತಾಲೂಕಿಗೆ ಸಂಬಂಧಿಸಿದ ಭೂದಾಖಲೆಗಳಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ. ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಭೂಮಾಪನ ಇಲಾಖೆ ಕಟ್ಟಡ ಶಿಥಿಲಗೊಂಡಿದ್ದರಿಂದ ಮಳೆಗಾಲದಲ್ಲಿ ನೀರು ಸೋರಿ ದಾಖಲೆಗಳು ಹಾಳಾಗುತ್ತಿವೆ. ಇದು ಇಂದು ನಿನ್ನೆಯದಲ್ಲ, ಈಗ್ಗೆ ಹಲವು ವರ್ಷಗಳಿಂದ ತಾಲೂಕಿನ ಭೂಮಿಗೆ ಸಂಬಂಧಿಸಿದ ಎಲ್ಲ ಶಾಶ್ವತ ದಾಖಲೆಗಳು ಗೆದ್ದಲು ಹಿಡಿಯುವ ಹಂತ ತಲುಪಿವೆ.
ಕೂಡ್ಲಿಗಿ ತಾಲೂಕು ಭೂಮಾಪನ ಇಲಾಖೆ ಕಟ್ಟಡ ನೋಡಿದರೆ ಎಂಥವರಿಗೂ ನಾಚಿಕೆ ಬರದೇ ಇರದು. ಯಾವ ಇಲಾಖೆ ಸುರಕ್ಷಿತವಾಗಿರಬೇಕೋ ಆ ಇಲಾಖೆಯೇ ಕೊಟ್ಟಿಗೆಗಿಂತಲೂ ದುಸ್ಥಿತಿಯಲ್ಲಿದೆ. ಇಲಾಖೆ ಅಧಿಕಾರಿಗಳು ಪಾಳುಮನೆಯಂತಿರುವ ಕಚೇರಿಯಲ್ಲೇ ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದೊದಗಿದೆ. ಭೂಮಾಪನ ಇಲಾಖೆಯಲ್ಲಿ 6 ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ಪರವಾನಗಿ ಪಡೆದ 20 ಭೂ ಮಾಪಕರು ಕಾರ್ಯನಿರ್ವಹಿಸುತ್ತಾರೆ. ಕಂಪ್ಯೂಟರ್‌ಗಳು, ದಾಖಲೆ ಪತ್ರಗಳ ಬಂಡಲ್‌ಗಳು, ತಾಲೂಕಿನ ಮೂಲೆ ಮೂಲೆಗೆ ಸಂಬಂಧಿಸಿದ ನೀಲನಕ್ಷೆಗಳು, ಅಳತೆ ದಾಖಲೆಗಳು, ಅದರಲ್ಲೂ ಶಾಶ್ವತ ದಾಖಲೆಗಳು ಇದ್ದರೂ ಕಟ್ಟಡದ ದುಸ್ಥಿತಿಯಿಂದ ಅವುಗಳ ಸಂರಕ್ಷಣೆ ಆಗದೆ ಇರುವುದು ದುರಂತ.
ಗಾಳಿ, ಬೆಳಕು ಸುಳಿಯಲ್ಲ: ಈ ಕಚೇರಿಯಲ್ಲಿ ಅಧಿಕಾರಿಗಳು ಕುಳಿತು ಕೆಲಸ ಮಾಡುವುದು ಕಷ್ಟಕರ. ಸಾಕಷ್ಟು ಗಾಳಿ, ಬೆಳಕು ಇಲ್ಲದ ಈ ಕಚೇರಿಗೆ ಜನತೆ ಬಂದರೆ ನಿಂತುಕೊಳ್ಳುವುದಕ್ಕೂ ಜಾಗವಿಲ್ಲ. ಇನ್ನೂ ಅಧಿಕಾರಿಗಳ ಜೊತೆ ಭೂ ದಾಖಲೆಗಳಿಗೆ ಸಂಬಂಧಿಸಿದ ವ್ಯವಹಾರ ಮಾಡಲು ಹೇಗೆ ಸಾಧ್ಯವಾದೀತು? ಭೂ ಮಾಪನ ಕಚೇರಿಗೆ ಸ್ವಂತ ಸೂಕ್ತ ಕಟ್ಟಡ ಇಲ್ಲದಿರುವುದರಿಂದ ತಾಲೂಕು ಕಚೇರಿ ಮುಂಭಾಗದ ಕಟ್ಟಡ ಮತ್ತು ಹಳೇ ಜೈಲು ಕಟ್ಟಡವೇ ಈ ಇಲಾಖೆಗೆ ಈಗ ಆಶ್ರಯತಾಣವಾಗಿದೆ. ಸ್ವಲ್ಪ ಮಳೆ ಬಂದರೂ ಈ ಕಟ್ಟಡಗಳು ಸೋರುತ್ತವೆ. ಪ್ಲಾಸ್ಟಿಕ್ ಹೊದಿಕೆ ಹೊದಿಸಿ ದಾಖಲೆಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ರಕ್ಷಿಸುವ ಸಾಹಸ ಮಾಡುತ್ತಾರೆ.
ಅನುದಾನವಿದ್ದರೂ ಕಟ್ಟಡವಿಲ್ಲ: ಭೂಮಾಪನ ಇಲಾಖೆ ಕಟ್ಟಡ ಮಾತ್ರವಲ್ಲ, ತಾಲೂಕು ಕೇಂದ್ರದಲ್ಲಿರುವ ಬಹುತೇಕ ಕಟ್ಟಡಗಳು ಸಹ ಇದೆ ದುಸ್ಥಿತಿಯಲ್ಲಿವೆ. ತಾಲೂಕು ಕೇಂದ್ರದ ಅನೇಕ ಇಲಾಖೆಗಳ ಕಟ್ಟಡ ಸಮಸ್ಯೆ ಹೋಗಲಾಡಿಸಲು ಮಿನಿ ವಿಧಾನಸೌಧ ಅಗತ್ಯವಿದೆ. ಅದಕ್ಕಾಗಿ ಶಾಸಕ ಬಿ. ನಾಗೇಂದ್ರ ಹೆಚ್ಚಿನ ಆಸಕ್ತಿ ವಹಿಸಿ ಅನುದಾನ ಮೀಸಲಿರಿಸಿದ್ದಾರೆ. ಆದರೆ, ಯಾವ ಸ್ಥಳದಲ್ಲಿ ಕಟ್ಟಡ ನಿರ್ಮಿಸಿದರೆ ಸೂಕ್ತ ಎಂಬ ಹುಡುಕಾಟ ಮುಂದುವರೆದಿದೆ. ಈಗಿರುವ ತಹಸೀಲ್ದಾರ್ ಕಚೇರಿ ತುಂಬಾ ಹಳೆಯದಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆಗಳ ದಾಖಲೆಗಳ ಪರಿಸ್ಥಿತಿ ಹೀಗೆಯೇ. ಇಲ್ಲಿನ ಕಚೇರಿ ಕಟ್ಟಡಗಳ ಅಧ್ವಾನವನ್ನು ಕಣ್ಣಾರೆ ಕಾಣುತ್ತಿರುವ ಜನತೆ ಮಿನಿ ವಿಧಾನಸೌಧ ನಿರ್ಮಾಣ ಯಾವಾಗ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ನಿತ್ಯ ನೂರಾರು ಜನರ ಭೂಮಿ ಸಮಸ್ಯೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ತೆಗೆದುಕೊಳ್ಳಲು ಬರುತ್ತಾರೆ. ಸೂಕ್ತ ಭೂ ದಾಖಲೆಗಳನ್ನು ನೀಡುವ ಇಲಾಖೆಯೇ ಸಂಕಷ್ಟ ಎದುರಿಸುವಂತಾಗಿದ್ದು, ಇಂತಹ ದುಸ್ಥಿತಿಯಲ್ಲಿರುವ ಇಲಾಖೆ ಕಟ್ಟಡಕ್ಕೆ ಮುಕ್ತಿ ಸಿಗುತ್ತದೆಯೇ? ಇಲಾಖೆಗೆ ಸಂಬಂಧಿಸಿದ ದಾಖಲೆ ಪತ್ರಗಳು ರಕ್ಷಣೆ ಪಡೆಯುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಭೂಮಾಪನ ಇಲಾಖೆ ಕಟ್ಟಡ ನೋಡಿದರೆ ಮರುಕ ಹುಟ್ಟುತ್ತದೆ. ಪಾಳುಮನೆಯಂತಿರುವ ಕಟ್ಟಡದಲ್ಲಿ ಅಧಿಕಾರಿಗಳು ಹಗಲೆಲ್ಲ ಕುಳಿತು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಆ ದೇವರಿಗೆ ಗೊತ್ತು. ಗಾಳಿ, ಬೆಳಕು ಇಲ್ಲದೆ ಹಂದಿಗೂಡಿನಂತಿರುವ ಈ ಕಚೇರಿಯಲ್ಲಿ ಬೆಲೆ ಕಟ್ಟಲಾಗದ ಭೂ ಕಾಗದ ಪತ್ರಗಳಿಗೆ ರಕ್ಷಣೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಭೂಮಿಯ ಬಗ್ಗೆ ಭೂ ಮಾಲೀಕರಿಗೆ, ರೈತರಿಗೆ ಯಾವ ರೀತಿ ದಾಖಲೆಗಳನ್ನು ಒದಗಿಸಲು ಸಾಧ್ಯ? ಕೆಲವು ಹಳೆಯ ಶಾಶ್ವತ ದಾಖಲೆಗಳು ಮಳೆ ನೀರಿಗೆ ತೋಯ್ದು ಅಕ್ಷರಗಳು ಸಹ ಮರೆಯಾಗಿವೆ. ಜನತೆ ಹೋರಾಟ ಮಾಡುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಟ್ಟಡ ನಿರ್ಮಿಸಿ ಅಮೂಲ್ಯ ದಾಖಲೆಗಳನ್ನು ರಕ್ಷಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕಿದೆ.
- ಕಕ್ಕುಪ್ಪಿ ಬಸವರಾಜ, ಕೂಡ್ಲಿಗಿ ತಾಲೂಕು ರೈತ ಸಂಘದ ಅಧ್ಯಕ್ಷ
ಭೀಮಣ್ಣ ಗಜಾಪುರ