ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅವನತಿಯತ್ತ ಜನಪದ ಸಾಹಿತ್ಯ

Lingaraj Badiger
Updated On : 22 Oct 2013, 10:57 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಅ.21
ಆಧುನಿಕ ಸಮೂಹ ಮಾಧ್ಯಮಗಳ ಪ್ರಭಾವದಿಂದ ಜನಪದ ಸಾಹಿತ್ಯ ಅವನತಿಯತ್ತ ಸಾಗುತ್ತಿದೆ ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಮಹೇಶ್ವರಯ್ಯ ಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ನಾಡೋಜ ಎಚ್.ಎಲ್. ನಾಗೇಗೌಡರ ಸ್ಮರಣಾರ್ಥ ತಾಲೂಕ ಕರ್ನಾಟಕ ಜನಪದ ಪರಿಷತ್ ಆಯೋಜಿಸಿದ್ದ 'ಶಾಲಾ ಕಾಲೇಜಿಗೊಂದು ಜನಪದ ಬಂಡಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವ ನಾಟಕ, ಬಯಲಾಟಗಳು ಕಣ್ಮರೆಯಾಗುತ್ತಿದ್ದು, ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಜಾನಪದ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕೊಪ್ಪಳದ ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ್ ಜಾನಪದ ಸಂಸ್ಕೃತಿಯ ಅರಿವು ಕುರಿತು ವಿಶೇಷ ಉಪನ್ಯಾಸ ನೀಡಿ, ಆಧುನಿಕ ವಿಚಾರಧಾರೆಗಳನ್ನು ಇಟ್ಟುಕೊಂಡೇ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿ ಅರಿವನ್ನು ಮೈಗೊಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮೇಟಿ ಕೊಟ್ರಪ್ಪ ಮಾತನಾಡಿ, ನಾಡೋಜ ಎಚ್.ಎಲ್. ನಾಗೇಗೌಡರ ಸ್ಮರಣಾರ್ಥ ಶಾಲಾ-ಕಾಲೇಜಿಗೊಂದು ಜನಪದ ಬಂಡಿ ಎಂಬ ವಿನೂತನ ಕಾರ್ಯಕ್ರಮ ರಾಜ್ಯದಲ್ಲೇ ಮೊದಲು. ಇಂತಹ ಕಾರ್ಯಕ್ರಮಗಳು ಜನಪದ ಕಲಾವಿದರು, ವಿದ್ಯಾರ್ಥಿಗಳು ಜನಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಲ್. ಖಾದರ್‌ಬಾಷಾ ಮಾತನಾಡಿದರು.
ಪ್ರಭಾರಿ ಪ್ರಾಚಾರ್ಯ ಶಾಂತಮೂರ್ತಿ ಬಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಕಾರ್ಯದರ್ಶಿ ಎಲ್. ಮಧುನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.  
ಅತಿಥಿ ಜನಪದ ಕಲಾವಿದರಾಗಿ ಆಗಮಿಸಿದ್ದ ಹ್ಯಾರಡ ಗ್ರಾಮದ ಚಮನ್‌ಸಾಬ್, ಜನಪದ ಗೀತೆ, ತತ್ವಪದ, ಲಾವಣಿ ಗೀತೆಗಳನ್ನು ಹಾಡಿದರು.
ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾನಪದ ಪ್ರಕಾರಗಳ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜನಪದ ಗೀತೆಯಲ್ಲಿ ಆನಂದಕುಮಾರ ಪ್ರಥಮ, ಬಿ.ಜಿ. ಆಗ್ರಹಾರ ದ್ವಿತೀಯ, ವೀಣಾಶ್ರೀ ತೃತೀಯ ಹಾಗೂ ಜನಪದ ನೃತ್ಯ ಸ್ಪರ್ಧೆಯಲ್ಲಿ ಶ್ರುತಿ ಸಂಗಡಿಗರು ಪ್ರಥಮ, ಸುರೇಶ ಮತ್ತು ಸಂಗಡಿಗರು ದ್ವಿತೀಯ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ತಾತಪ್ಪ ಪ್ರಥಮ, ಡಿ. ರೇಖಾ ದ್ವಿತೀಯ, ಯಶೋದಾ ತೃತೀಯ ಸ್ಥಾನ ಪಡೆದರು ಬಹುಮಾನ ಪಡೆದರು.
ಎಚ್.ಕೆ. ಮಹೇಶ ಸ್ವಾಗತಿಸಿದರು. ಪಿ.ಎಂ. ಬಸವಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು. ಎಂ.ಪಿ.ಎಂ. ಅಶೋಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement