ಗ್ರಾಮೀಣ ಭಾಗಗಳಲ್ಲಿ ಕ್ರೀಡೆಗೆ ಒತ್ತು ಅಗತ್ಯ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 21
ಸಂಪ್ರದಾಯದ ಕ್ರೀಡೆಗಳು ಹಳ್ಳಿಗಾಡಿನಿಂದ ಮರೆಯಾಗುತ್ತಿದ್ದು, ಸಂಘ, ಸಂಸ್ಥೆಗಳು, ಯುವಜನತೆ ಕ್ರೀಡೆಗಳಿಗೆ ಒತ್ತು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಎನ್.ಟಿ. ತಮ್ಮಣ್ಣ ಅಭಿಪ್ರಾಯಿಸಿದರು.
ಅವರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಾಲ್ಮೀಕಿ ಜಯಂತಿ ಪ್ರಯುಕ್ತ ಸ್ವಾಮಿ ವಿವೇಕಾನಂದ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಚಿನ್ನಿಕೋಲು, ಬಗರಿ, ಕಬಡ್ಡಿ, ಕೆಸರುಗದ್ದೆಯಾಟ, ಕುಸ್ತಿ ಸೇರಿದಂತೆ ಅನೇಕ ಗ್ರಾಮೀಣ ಕ್ರೀಡಾಕೂಟಗಳನ್ನು ಜನತೆ ಆಸ್ವಾದಿಸುತ್ತಿದ್ದರು. ಆದರೆ ಅವಸರದ ಬದುಕಿನಲ್ಲಿ ಈಗ ತೆರೆಮರೆಗೆ ಸರಿಯುತ್ತಿರುವುದು ದುರ್ದೈವ. ಕ್ರೀಡಾಕೂಟಗಳನ್ನು ನಡೆಸಲು ಸರ್ಕಾರ ನೆರವು ನೀಡಿದಲ್ಲಿ ಕ್ರೀಡೆಗಳ ಬಗ್ಗೆ ಯುವಕರನ್ನು ಮನವೊಲಿಸಲು ಸಾಧ್ಯವಾಗುತ್ತದೆ ಎಂದರು.
ಬಂಗಾರಿ ಹನುಮಂತು ಮಾತನಾಡಿ, ಕೂಡ್ಲಿಗಿ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ತಾಲೂಕಾಗಿದ್ದು, ಇಲ್ಲಿನ ಕುಸ್ತಿಪಟುಗಳು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವುದನ್ನು ಸ್ಮರಿಸಿದರು. ಯುವ ಸಮೂಹ ಕ್ರೀಡಾಸಕ್ತಿ ಹೊಂದುವ ಮೂಲಕ ಕ್ರೀಡಾ ಕ್ಷೇತ್ರದಲ್ಲೂ ದೊಡ್ಡ ಸಾಧನೆ ಮಾಡುವ ಅವಕಾಶವಿದೆ. ಜತೆಗೂ ಉತ್ತಮ ಆರೋಗ್ಯವನ್ನು ಯುವಕರು ಹೊಂದಲು ಸಾಧ್ಯವಾಗುತ್ತದೆ ಎಂದರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ 22 ತಂಡಗಳಲ್ಲಿ ಹೊಸಪೇಟೆ ವಿಜಯನಗರ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ತಂಡ (ಪ್ರಥಮ), ಬಾಸ್ ಬೆಂಗಳೂರು ತಂಡ (ದ್ವಿತೀಯ), ದಾವಣಗೆರೆ ಫೈವ್ಸ್ ತಂಡ (ತೃತೀಯ) ಹಾಗೂ ರಾಯಚೂರು ವೆಂಕಿ ವಾರಿಯರ್ಸ್ ತಂಡ (ಸಮಾಧಾನಕರ) ಬಹುಮಾನ ಪಡೆದವು. ಈ ಎಲ್ಲ ತಂಡಗಳಿಗೆ ಬಹುಮಾನವಾಗಿ ನಗದು, ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಣ್ಣಕೊತ್ಲಪ್ಪ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಿ. ನಾಗರಾಜ್, ಪೆಟ್ರೋಲ್ಬಂಕ್ ಗಂಗಣ್ಣ, ಶಿಕ್ಷಕ ಗುಪ್ಪಾಲ್ ಕೊಟ್ರೇಶ್, ಪಪಂ ಸದಸ್ಯರಾದ ಎನ್.ಎಂ. ನೂರ್ಅಹ್ಮದ್, ಬಿ. ನಾಗರಾಜ್, ಸ್ವಾಮಿ ವಿವೇಕಾನಂದ ಕ್ಲಬ್ ಅಧ್ಯಕ್ಷ ಡೊಕ್ಕೆ ನಾಗರಾಜ, ಉಪಾಧ್ಯಕ್ಷ ರಾಮಸಾಲಿ ಅಜಯ್, ಸದಸ್ಯರಾದ ಬಾಲಕೃಷ್ಣ, ಬಿಬಿಎಕೆ ರಾಜ್ಯಾಧ್ಯಕ್ಷ ನಾಗನಗೌಡ, ಉಪಾಧ್ಯಕ್ಷ ಲಕ್ಷ್ಮಣ್ ಸಿದ್ದಾಪುರ ಮುಂತಾದವರು ಉಪಸ್ಥಿತರಿದ್ದರು.