ಬಿಇಡಿ ವಿದ್ಯಾರ್ಥಿಗಳಿಗೆ ಸಿಗದ ವಿದ್ಯಾಶ್ರೀ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 21
ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ವಿದ್ಯಾಶ್ರೀ ಯೋಜನೆ ರಾಜ್ಯದ 411 ಬಿಇಡಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳನ್ನು ಕತ್ತಲಲ್ಲಿ ಇಡುವಂತೆ ಮಾಡಿದೆ.
ಬಿಇಡಿ ಶೈಕ್ಷಣಿಕ ವರ್ಷ ಡಿಸೆಂಬರ್ ಅಥವಾ ಜನವರಿಯಿಂದ ಆರಂಭವಾಗುವುದರಿಂದ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಿದ್ಯಾಶ್ರೀ ಯೋಜನೆ 2012-13ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ವೇತನಕ್ಕಾಗಿ ಅರ್ಜಿ ಹಾಕಲು ಅ. 22 ಕೊನೆ ದಿನವಾಗಿರುವುದು ರಾಜ್ಯದ ಸಾವಿರಾರು ಬಿಇಡಿ ವಿದ್ಯಾರ್ಥಿಗಳನ್ನು ತೀವ್ರ ಗೊಂದಲಕ್ಕೀಡು ಮಾಡುವ ಜತೆಗೆ ಬಡ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನದಿಂದ ವಂಚಿತರಾಗುವಂತೆ ಮಾಡಿದೆ.
ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾಶ್ರೀ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿರುವುದು ಸಂತೋಷವಾದರೂ, 2012-13ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದಂತೆ ಯೋಜನೆ ರೂಪಿಸಿರುವುದು ಗೊಂದಲ ಸೃಷ್ಟಿಸಿದೆ. ಹಳೆಯ ಯೋಜನೆ ಬದಲಾಗಿ ಸರ್ಕಾರ ವಿದ್ಯಾಶ್ರೀ ಜಾರಿಗೆ ತಂದಿರುವುದರಿಂದ ಹಳೆಯ ಯೋಜನೆಯಡಿ ಬಿಇಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾರದಾಗಿದೆ.
ಗೊಂದಲ ತಂದ ಆನ್ಲೈನ್ ಅಪ್ಲಿಕೇಷನ್: ಈ ಹಿಂದೆ ಬಿಇಡಿ ಕಲಿಯುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡುತ್ತಿದ್ದ ವಿದ್ಯಾರ್ಥಿ ವೇತನಕ್ಕಾಗಿ ಆಯಾ ಕಾಲೇಜುಗಳ ಮೂಲಕ ಅರ್ಜಿಯನ್ನು ಸಲ್ಲಿಸುತ್ತಿದ್ದರು. ಆದರೆ ಇದೀಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಿದ್ಯಾಶ್ರೀ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆನ್ಲೈನ್ನಲ್ಲಿಯೇ ಸಲ್ಲಿಸಬೇಕು. ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ಅರ್ಜಿಗಳು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಕಚೇರಿಗೆ ಬಂದರೆ ಸಹಿ ಮಾಡುತ್ತೇವೆ: ಅಧಿಕಾರಿ: ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಖಿನಾ ಅವರನ್ನು ಸಂಪರ್ಕಿಸಿದಾಗ, ಇಂತಹ ಗೊಂದಲ ಕುರಿತು ವಿಡಿಯೋ ಕಾನ್ಫರೆನ್ಸ್ನಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಿಇಡಿ ಸೇರಿದಂತೆ ಇತರ ತಾಂತ್ರಿಕ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರಿಂದ ಬಿಇಡಿ ಸೇರಿದಂತೆ ಇತರ ಕೋರ್ಸ್ಗಳು ಆರಂಭವಾದ ನಂತರ ಹೊಸ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಕೊಡಲಾಗುತ್ತದೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ವಿದ್ಯಾರ್ಥಿಗಳ ಅರ್ಜಿಗೆ ಬಿಇಡಿ ಕಾಲೇಜುಗಳ ಪ್ರಾಚಾರ್ಯರು ಸಹಿ ಮಾಡದಿದ್ದರೆ, ಇಲಾಖೆಯ ಕಚೇರಿಗೆ ಬಂದರೆ ಸಹಿ ಮಾಡುತ್ತೇವೆ. 2012-13ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳು ಅ. 22ರಂದು ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ. ಈ ಕುರಿತು ಬಿಇಡಿ ಕಾಲೇಜು ಪ್ರಾಚಾರ್ಯರನ್ನು ಸಂಪರ್ಕಿಸಿದಾಗ, ತಮಗೆ ಅಧಿಕೃತವಾದ ಯಾವುದೇ ಆದೇಶ ಬಂದಿಲ್ಲ, ಅಧಿಕೃತ ಆದೇಶ ಕಾಲೇಜುಗಳಿಗೆ ಬಂದರೆ ನಾವೇ ಸಹಿ ಮಾಡುತ್ತೇವೆ ಎಂದು ತಿಳಿಸುತ್ತಾರೆ. ಆದರೆ ಬಿಇಡಿ ವಿದ್ಯಾರ್ಥಿಗಳು ಮಾತ್ರ, ಅರ್ಜಿ ಸಲ್ಲಿಸಲು ಅ. 22 ಕೊನೆಯ ದಿನಾಂಕವಾಗುವುದರಿಂದ ಕಾಲೇಜುಗಳ ಪ್ರಾಚಾರ್ಯರಿಗೆ, ನಮಗೆ ಗೊಂದಲವಾಗಿದೆ. ಬಡತನದಿಂದ ಬಂದ ನಮಗೆ ಸರ್ಕಾರ ಕೊಡುವ ವಿದ್ಯಾರ್ಥಿ ವೇತನ ಎಷ್ಟೋ ಆಸರೆಯಾಗುತ್ತದೆ, ಇದೀಗ ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ತಮ್ಮ ಆತಂಕ ಹೊರಹಾಕುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಕಳಕಳಿಯಿಂದ ಆರಂಭಿಸಿರುವ ವಿದ್ಯಾಶ್ರೀ ವಿದ್ಯಾರ್ಥಿ ವೇತನ 2012-13ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳಿಗೆ ಕಂಟಕವಾಗುತ್ತಿದೆ. ಕೂಡಲೇ ಎಚ್ಚೆತ್ತು, ಯೋಜನೆಯ ಸದುದ್ದೇಶ ಬಿಇಡಿ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ.
ಗೊಂದಲದಲ್ಲಿ ವಿದ್ಯಾರ್ಥಿಗಳು
ಸರ್ಕಾರ ಬಿಡುಗಡೆ ಮಾಡಿರುವ ಆನ್ಲೈನ್ ಅರ್ಜಿಗಳಲ್ಲಿ 2013-14ನೇ ಸಾಲಿನ ವಿದ್ಯಾಶ್ರೀ ವಿದ್ಯಾರ್ಥಿ ವೇತನ ಎಂದು ನಮೂದಿಸಲಾಗಿದೆ. ಬಿಇಡಿ ವಿದ್ಯಾರ್ಥಿಗಳು ಹಳೆ ಅರ್ಜಿಗಳನ್ನು ಸಲ್ಲಿಸಲು ಬರುವುದಿಲ್ಲ, ಆನ್ಲೈನ್ ಅರ್ಜಿ ಸಲ್ಲಿಸಬೇಕೆಂದು ಹೇಳುತ್ತಿದ್ದಾರೆ ಅಧಿಕಾರಿಗಳು. ಆದರೆ 2012-13ನೇ ಸಾಲಿನ ವಿದ್ಯಾರ್ಥಿಗಳಾಗಿರುವುದರಿಂದ 2013-14ನೇ ಸಾಲಿಗೆ ಅರ್ಜಿ ಸಲ್ಲಿಸಲು ಹೇಗೆ ಬರುತ್ತದೆ? ಈ ಗೊಂದಲದಿಂದಾಗಿ 2012-13ನೇ ಸಾಲಿನ ಬಿಇಡಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಅರ್ಜಿಗೆ ಸಹಿ ಮಾಡಲು ಕಾಲೇಜುಗಳ ಪ್ರಾಚಾರ್ಯರು ಹಿಂದೇಟು ಹಾಕುತ್ತಿದ್ದಾರೆ. 2012-13ನೇ ಸಾಲಿನ ವಿದ್ಯಾರ್ಥಿಗಳಿಗೆ 2013-14ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿಗೆ ಸಹಿ ಮಾಡುವುದಾದರೂ ಹೇಗೆ ಎಂಬುದು ಬಿಇಡಿ ಕಾಲೇಜು ಪ್ರಾಚಾರ್ಯರ ಪ್ರಶ್ನೆ.
- ವೈ.ಎಂ. ಸಿದ್ಧಲಿಂಗಸ್ವಾಮಿ