ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

100 ಹಾಸಿಗೆ ಆಸ್ಪತ್ರೆಯಲ್ಲಿ ಬೆರಳೆಣಿಕೆ ಸಿಬ್ಬಂದಿ

Lingaraj Badiger
Updated On : 23 Oct 2013, 10:50 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 22
ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ ಸರ್ಕಾರ ಆಸ್ಪತ್ರೆಗಳನ್ನು ನಿರ್ಮಿಸಿದೆ. ಆದರೆ, ಸಿಬ್ಬಂದಿ, ತಜ್ಞ ವೈದ್ಯರಿಲ್ಲದೇ ಸರ್ಕಾರಿ ಆಸ್ಪತ್ರೆಯೇ ರೋಗಗ್ರಸ್ತವಾದರೆ ಆಸ್ಪತ್ರೆಗೆ ಚಿಕಿತ್ಸೆ ನೀಡುವವರಾರು? ಇಂಥದ್ದೊಂದು ರೋಗಗ್ರಸ್ತ ಆಸ್ಪತ್ರೆ ಇರುವುದು ಯಾವುದೋ ಮೂಲೆಯಲ್ಲಿ ಅಲ್ಲ. ರಾಷ್ಟ್ರೀಯ ಹೆದ್ದಾರಿ 13ರ ಪಕ್ಕದಲ್ಲಿಯೇ ಇರುವ ತಾಲೂಕು ಕೇಂದ್ರವಾದ ಕೂಡ್ಲಿಗಿ ಪಟ್ಟಣದಲ್ಲಿ ಎಂಬುದು ಆಶ್ಚರ್ಯದ ಸಂಗತಿ.
100 ಹಾಸಿಗೆ ಆಸ್ಪತ್ರೆಯಲ್ಲಿ ನೂರಾರು ಸಿಬ್ಬಂದಿ ಇರಬೇಕು. ಆದರೆ, ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿ ಇದ್ದಾರೆ. ಒಬ್ಬ ಸೂಪರಿಟೆಂಡೆಂಟ್ ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕ ಇವರಿಬ್ಬರೇ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ಮೂವರು ಪ್ರಥಮ ದರ್ಜೆ ಗುಮಾಸ್ತರಿರಬೇಕಾಗಿರುವ ಈ ಆಸ್ಪತ್ರೆಯಲ್ಲಿ 3 ಹುದ್ದೆಗಳೂ ಖಾಲಿ ಇವೆ. 5 ದ್ವಿತೀಯ ದರ್ಜೆ ಸಹಾಯಕರಿರಬೇಕಾದ ಈ ಆಸ್ಪತ್ರೆಯಲ್ಲಿ ಕೇವಲ ಒಬ್ಬ ದ್ವಿತೀಯ ದರ್ಜೆ ಸಹಾಯಕನಿದ್ದಾನೆ. ಹೀಗಾಗಿ, ಚಿಕಿತ್ಸೆಗೆಂದು ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ ತಾಲೂಕಿನಿಂದ ಬರುವ ರೋಗಿಗಗಳ ಪಾಡಂತೂ ಹೇಳತೀರದು.             
12ರಲ್ಲಿ ಇಬ್ಬರೇ ವೈದ್ಯರು: ಆಸ್ಪತ್ರೆಯಲ್ಲಿ 12 ವಿವಿಧ ತಜ್ಞ ವೈದ್ಯರು ಕಾರ್ಯನಿರ್ವಹಿಸಬೇಕು. ಆದರೆ, ಇಬ್ಬರು ಮಾತ್ರ ಇದ್ದಾರೆ. ಆದರೆ, ಇತ್ತೀಚೆಗೆ ತಾಲೂಕು ವೈದ್ಯಾಧಿಕಾರಿಯಾಗಿ ನೇಮಕವಾಗಿರುವ ಡಾ. ವಿನಯ್ ಬಂದ ಮೇಲೆ 3 ವೈದ್ಯರನ್ನು ಪಕ್ಕದ ಆಸ್ಪತ್ರೆಗಳಿಂದ ಡೆಪ್ಯುಟೇಶನ್ ಮೇಲೆ ಕರೆಯಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಒಂದೆರಡು ತಿಂಗಳಿಂದ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತದೆ ಎಂಬುದು ತುಸು ಸಮಾಧಾನದ ಸಂಗತಿ.
ನೋಡಲು ಸುವ್ಯವಸ್ಥಿತ ಕಟ್ಟಡ ಹೊಂದಿರುವ ಕೂಡ್ಲಿಗಿ ಆಸ್ಪತ್ರೆಗೆ ಸಿಬ್ಬಂದಿ ಹಾಗೂ ವೈದ್ಯರ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಹಲವು ಸಂಘಟನೆಗಳು ಸಿಬ್ಬಂದಿಯನ್ನು ನೇಮಿಸುವಂತೆ ಒತ್ತಾಯಿಸಿದ್ದವು. ಹೀಗಾಗಿ, ವೈದ್ಯರನ್ನು ಎರವಲು ಪಡೆಯಲಾಗಿದೆ.  ಇದರಿಂದಾಗಿ ರೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.
ಬರೀ ಮುಖ್ಯ ಸಿಬ್ಬಂದಿ ಹಾಗೂ ವೈದ್ಯರಲ್ಲದೇ ಶುಶ್ರೂಷಕ ಅಧಿಕಾರಿ ಹುದ್ದೆಗಳೂ ಖಾಲಿ ಇವೆ. 4 ಕ್ಷಕಿರಣ ಟೆಕ್ನಿಷಿಯನ್ ಇರಬೇಕಾದ ಸ್ಥಳದಲ್ಲಿ 2 ಟೆಕ್ನಿಷಿಯನ್ ಮಾತ್ರ ಇದ್ದಾರೆ. ಇಬ್ಬರು ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆ ಇದ್ದರೂ ಎರಡು ಹುದ್ದೆಗಳೂ ಖಾಲಿ ಇವೆ. 44 ಗ್ರೂಪ್ ಡಿ ಸಿಬ್ಬಂದಿಯಲ್ಲಿ ಈಗ 26 ಗ್ರೂಪ್ ಡಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 3-4 ವರ್ಷಗಳಿಂದ ಇಲ್ಲಿ 40ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಆಸ್ಪತ್ರೆಯನ್ನು ಆಗಿಂದಾಗ್ಗೆ ಶುಚಿ ಮಾಡುವುದರಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಆದರೆ, 100 ಹಾಸಿಗೆ ಆಸ್ಪತ್ರೆಗೆ ಅಗತ್ಯ ವೈದರು, ಸಿಬ್ಬಂದಿ ನೇಮಕ ಮಾಡಿದರೆ ಮಾತ್ರ ಸರ್ಕಾರಿ ಆಸ್ಪತ್ರೆಗಳ ಮೇಲೆ ಜನತೆಗೆ ನಂಬಿಕೆ ಬರುತ್ತದೆ.

ಉತ್ತಮ ಸೇವೆ ನೀಡಲು ಯತ್ನ
ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ರೆಗ್ಯುಲರ್ ವೈದ್ಯರಿದ್ದು, ಇನ್ನೂ ಮೂವರು ವೈದ್ಯರನ್ನು ಡೆಪ್ಯೂಟೇಶನ್ ಮೇಲೆ ನಿಯೋಜಿಸಲಾಗಿದೆ. ಇದರಿಂದಾಗಿ ಸದ್ಯ ಇರುವ ವೈದ್ಯರಲ್ಲಿಯೇ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಸೇವೆ ಕೊಡುತ್ತಿದ್ದೇವೆ. 26 ಡಿ ಗ್ರೂಪ್ ನೌಕರರು ಇಲ್ಲಿದ್ದು, ಅವರಿಗೆ ಆಡಳಿತದ ಚುರುಕು ಮುಟ್ಟಿಸಿ ಉತ್ತಮ ಕೆಲಸ ತೆಗೆದುಕೊಂಡು ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟಿದ್ದೇವೆ. ತಾಲೂಕಿನ ಎಲ್ಲೆ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
- ಡಾ. ವಿನಯ್, ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ

-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement