ಕೇಂದ್ರ ಸರ್ಕಾರದಿಂದ ಮೌಢ್ಯಕ್ಕೆ ಉತ್ತೇಜನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 22
ಆಡಂಬರದ ಸ್ವಾಮೀಜಿಗಳ ಹಿಂದೆ ಬಿದ್ದು, ಜನರಲ್ಲಿ ಮೌಢ್ಯವನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ ಎಂದು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಆರೋಪಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕದಳ ಜಂಟಿಯಾಗಿ ಸೋಮವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಬಳ್ಳಾರಿ ನಗರದ ಸ್ಲಂ ಜನರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳ ಮೂಲಕ ಸರ್ಕಾರಗಳು ಪವಾಡ, ವದಂತಿ, ಮೂಢನಂಬಿಕೆಗಳಿಗೆ ಬಲಿಯಾಗುತ್ತಿವೆ ಎಂದರು.
ನಗರದ ಜಾಗೃತಿ ನಗರ್, ಸಮತಾ ನಗರ, ಬಟ್ಟಿ ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಜನರನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಅವರನ್ನು ತೆರವುಗೊಳಿಸುವ ಬದಲು ಆ ಸ್ಥಳದಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ ರು. 4 ಲಕ್ಷ ವೆಚ್ಚದಲ್ಲಿ ಉತ್ತಮ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಕನ್ನಡ ಪ್ರಾಧ್ಯಾಪಕಿ ಮಲ್ಲಿಕಾ ಘಂಟಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಸಚಿವ ಡಾ. ಕೆ. ವಿಜಯಕುಮಾರ್ ಮಾತನಾಡಿ, ಮೂಢನಂಬಿಕೆ, ಸನಾತನ ವಾದಿಗಳನ್ನು ಮೆಟ್ಟಿನಿಂತು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅನುಷ್ಠಾನಗೊಳಿಸಲು ಇಂದಿನ ರಾಜಕೀಯ ಮುಖಂಡರಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಕನಕ ದುರ್ಗಮ್ಮ ದೇವಸ್ಥಾನದಿಂದ ಮೆರವಣಿಗೆ ನಡೆಸಲಾಯಿತು.
ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೆ. ಪೃಥ್ವಿರಾಜ್, ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಎರಕುಲಸ್ವಾಮಿ, ಮಾಜಿ ಅಧ್ಯಕ್ಷ ಎಲ್. ಮಾರೆಣ್ಣ, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ, ಬುಡಾದ ಮಾಜಿ ಅಧ್ಯಕ್ಷ ಡಿ. ವಿನೋದ್‌ಕುಮಾರ್, ಮುಖಂಡರಾದ ಕಲ್ಲುಕಂಬ ಪಂಪಾಪತಿ, ರೆಡ್‌ಕ್ರಾಸ್‌ನ ದೇವಣ್ಣ ಇನ್ನಿತರರಿದ್ದರು. ರವಿ ಚೇಳ್ಳಗುರ್ಕಿ ನಿರೂಪಿಸಿದರು.