ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೆಡಿಎಸ್‌ಗೆ ಹೋಗಿದ್ದಕ್ಕೆ ಪಶ್ಚಾತ್ತಾಪ

Lingaraj Badiger
Updated On : 24 Oct 2013, 10:53 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 23
ಈ ಹಿಂದೆ ಬಿಜೆಪಿ ತೊರೆದು ಜೆಡಿಎಸ್‌ಗೆ ಹೋಗಿದ್ದು ತಮಗೆ ಪಶ್ಚಾತ್ತಾಪ ತಂದಿದೆ. ಬಿಜೆಪಿಯ ಒಡಕಿನಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗೆದ್ದು, ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಮಾಜಿ ಸದಸ್ಯ ಶಶಿಲ್ ನಮೋಶಿ ಹೇಳಿದರು.
ಬುಧವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿಯಿಂದ ಹೊರಗೆ ಹೋದ ಫಲವಾಗಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಪಡೆದು, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಬಿಎಸ್‌ವೈ ಬಿಜೆಪಿಗೆ ಬರಬೇಕೆಂಬುದು ತಮ್ಮೆಲ್ಲರ ಆಶಯ. ಬಿಜೆಪಿಗೆ ಯಾರಾದರೂ ಬರಬಹುದು, ಬಿಜೆಪಿ ಬಾಗಿಲು ತೆರೆದಿದೆ. ಇದೀಗ ಬಿಜೆಪಿ ಬಿಟ್ಟವರು ಮರಳಿ ಬಂದರೆ ಬಿಜೆಪಿ ಬಲ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
ಸರ್ಕಾರಕ್ಕೆ ಸ್ಪಷ್ಟ ನಿಲುವಿಲ್ಲ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಅನುಷ್ಠಾನ (ಆರ್‌ಎಂಎಸ್‌ಎ)ದ ಕುರಿತಾಗಿ ರಾಜ್ಯ ಸರ್ಕಾರ ಸ್ವಷ್ಟ ನಿಲುವು ಸಾಧಿಸುತ್ತಿಲ್ಲ. ಕೇಂದ್ರ ಸರ್ಕಾರ ಆರ್‌ಎಂಎಸ್‌ಎ 2015ರ ಒಳಗೆ ಜಾರಿಗೆ ತಂದರೆ ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ. ಯೋಜನೆ ಅನುಷ್ಠಾನದ ಕುರಿತು ಪ್ರೊ. ಗೋವಿಂದರಾಜ ಸಮಿತಿ ರಚನೆ ಮಾಡಿದ್ದು, ಏಪ್ರಿಲ್‌ನಲ್ಲಿ ಯೋಜನೆ ಅನುಷ್ಠಾನದ ಕುರಿತ ವರದಿ ಸಲ್ಲಿಸಿದ್ದು, ವರದಿಯ ಅಂಶಗಳನ್ನು ರಾಜ್ಯ ಸರ್ಕಾರ ಈ ವರೆಗೆ ಬಹಿರಂಗ ಪಡಿಸಿಲ್ಲ. ಇನ್ನು ಯೋಜನೆಗಳ ಅನುಷ್ಠಾನದ ಕುರಿತು ಸಾಧಕ-ಬಾಧಕ ಕುರಿತಾಗಿ ಶಿಕ್ಷಕರ ಪ್ರತಿನಿಧಿ ಹಾಗೂ ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿಲ್ಲ ಎಂದರು.
ಈ ಯೋಜನೆಯನ್ನು ಮುಂದಿನ ವರ್ಷ ಜಾರಿಗೊಳಿಸಲಾಗುವುದು ಎಂದು ಹೇಳಿರುವುದಾಗಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ತಿಳಿಸಿರುವುದರಿಂದ ಇನ್ನು 3-4 ತಿಂಗಳು ಬಾಕಿ ಇದೆ. ತರಾತುರಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುವುದರಿಂದ ಶಿಕ್ಷಕರು, ಶಾಲಾ, ಕಾಲೇಜುಗಳಿಗೆ ತೊಂದರೆಯಾಗುತ್ತದೆ. ಯೋಜನೆ ಜಾರಿಯಿಂದಾಗಿ 6, 7, 8 ಪ್ರಾಥಮಿಕ ಹಂತವೆಂದು, 9, 10, 11, 12 ಮಾಧ್ಯಮಿಕ ಹಂತವೆಂದ ಪರಿಗಣಿಸುವುದರಿಂದ ಶಾಲೆಗಳು, ಶಿಕ್ಷಕರು ಗೊಂದಲ ಎದುರಿಸುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನದ ಕುರಿತು ಶಿಕ್ಷಣ ತಜ್ಞರೊಂದಿಗೆ ಚರ್ಚೆ ಹಾಗೂ ಗೋವಿಂದರಾಜ ವರದಿ ಬಹಿರಂಗಪಡಿಸುವುದರಿಂದ ಅನುಕೂಲವಾಗುತ್ತದೆ ಎಂದರು.
ಕೋರ್ಟ್ ಆದೇಶ ಪಾಲಿಸಿಲ್ಲ: ಕಾಲ್ಪನಿಕ ಬಡ್ತಿಯನ್ನು ಸೇವೆಗೆ ಸೇರಿದ ದಿನಾಂಕದಿಂದ ಕೆಲವರಿಗೆ ನೀಡಿದ್ದರೆ, ಇನ್ನು ಕೆಲವರಿಗೆ ನೀಡಿಲ್ಲ. ಈ ಕುರಿತು ಕೆಲವರು ಕೋರ್ಟ್‌ಗೆ ಹೋಗಿದ್ದು, ಸುಪ್ರೀಂಕೋರ್ಟ್ ಕಾಲ್ಪನಿಕ ಬಡ್ತಿ ನೀಡುವಂತೆ ತಿಳಿಸಿದ್ದರೂ ಈ ವರೆಗೆ ರಾಜ್ಯ ಸರ್ಕಾರ ಕೋರ್ಟ್‌ನ ಆದೇಶ ಪಾಲನೆ ಮಾಡಿಲ್ಲ. ಇನ್ನು ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರಿಗೆ 2006ರಿಂದ ಸುಮಾರು ರು. 1100 ಕೋಟಿ ಅರಿಯರ್ಸ್ ಕೊಡಬೇಕಾಗಿದ್ದು, ಇಲ್ಲಿಯವರೆಗೆ ನೀಡಿಲ್ಲ. ಎರಡು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಹಿಂದಿನ ಸರ್ಕಾರ ಹೇಳಿದ್ದು, ಈ ಸರ್ಕಾರ ಅರಿಯರ್ಸ್ ನೀಡುವಲ್ಲಿ ವಿಫಲವಾಗಿದೆ. ಕೂಡಲೇ ಅರಿಯರ್ಸ್ ನೀಡಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮುರಹರಿಗೌಡ, ಪ್ರಸಾದ ರೆಡ್ಡಿ, ವೇಮನ, ಅನಿಲ್ ನಾಯ್ಡು, ಸುಧಾಕರ ರೆಡ್ಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement