ಪ್ರತಿ ಚ.ಮೀ. ಜಾಗಕ್ಕೆ ರು. 10 ನಿಗದಿ: ಪಪಂ ನಿರ್ಣಯ
ಕೊಟ್ಟೂರು: ಪಟ್ಟಣದಲ್ಲಿ ರಚನೆಗೊಳ್ಳುವ ವಸತಿ ವಿನ್ಯಾಸಗಳಿಗೆ ಪ್ರತಿ ಚದರ ಮೀಟರ್ಗೆ ಈ ಹಿಂದೆ ಪಟ್ಟಣ ಪಂಚಾಯಿತಿ ನಿಗದಿಗೊಳಿಸಿದ್ದ ರು. 25 ಶುಲ್ಕವನ್ನು ರು. 10ಗೆ ನಿಗದಿಗೊಳಿಸುವುದು. ಮುಸ್ಲಿಂ ಸಮುದಾಯ ಭವನವನ್ನು ರು. 2.50 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ಪ್ರಮುಖ ನಿರ್ಧಾರವನ್ನು ಕೊಟ್ಟೂರು ಪಟ್ಟಣ ಪಂಚಾಯಿತಿಯ ವಿಶೇಷ ಸಭೆಯಲ್ಲಿ ಕೈಗೊಳ್ಳಲಾಯಿತು.
ಬುಧವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಅಧ್ಯಕ್ಷೆ ಅನಸೂಯಾ ಸೆರೆಗಾರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮುಖ್ಯಾಧಿಕಾರಿ ಹನುಮಂತಮ್ಮ 10 ವಿಷಯಗಳನ್ನು ಚರ್ಚಿಸಿ ಅನುಮೋದನೆಗೊಳ್ಳಬೇಕಿದೆ ಎಂದು ಹೇಳಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ತುಂಡು ಜಾಗ (ಕಣ)ಗಳಿಗೆ ಅಭಿವೃದ್ಧಿ ಶುಲ್ಕವೆಂದು ಇನ್ನುಮುಂದೆ ಪ್ರತಿ ಚ.ಮೀ.ಗೆ ರು. 13ರಂತೆ ವಸೂಲಿ ಮಾಡಲು ತೀರ್ಮಾನಿಸಿದ್ದು ಸಭೆಯ ಅನುಮತಿ ಬೇಕೆಂದರು. ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ಸದಸ್ಯರು ಪಪಂಗೆ ಇದೊಂದು ವರಮಾನವಾಗಲಿದೆ, ನಮ್ಮೆಲ್ಲರ ಒಪ್ಪಿಗೆ ಇದೆ ಎಂದು ನಿರ್ಣಯದ ಅಂಗೀಕಾರಕ್ಕೆ ಒಪ್ಪಿದರು. ಸಭೆಯಲ್ಲಿ ಇತರ 8 ಪ್ರಮುಖ ವಿಷಯಗಳು ಮತ್ತು ಅಧ್ಯಕ್ಷರ ಅಪ್ಪಣೆಯ ಮೇರೆಗಿನ 2 ವಿಷಯಗಳ ಕುರಿತು ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆದಕೊಂಡಿದ್ದು ಗಮನಾರ್ಹ ಸಂಗತಿ.
ವಾಗ್ವಾದ, ಸಭಾತ್ಯಾಗ: ಪಟ್ಟಣ ಪಂಚಾಯಿತಿಯ ಮೊದಲ ಸಭೆ ಈ ತಿಂಗಳ 10ರಂದು ನಡೆದಿತ್ತು. ಸಭೆಯಲ್ಲಿ ಸೋಲಾರ್ ದೀಪ ಅಳವಡಿಸುವುದಕ್ಕೆ ಬದಲಾಗಿ ಇದಕ್ಕೆ ಮೀಸಲಾದ ರು. 6 ಲಕ್ಷವನ್ನು 7ನೇ ವಾರ್ಡಿನಲ್ಲಿ ಸಿಸಿ ಕಾಲುವೆ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಅದಕ್ಕಿಂತ ಪ್ರಮುಖವಾಗಿ 17ನೇ ವಾರ್ಡ್ನಲ್ಲಿ ತುರ್ತು ಆರ್.ಸಿ.ಸಿ ಕಾಲುವೆ ಮತ್ತು ಡೆಸ್ಕ್ಸ್ಲ್ಯಾಬ್ ನಿರ್ಮಿಸುವುದಕ್ಕೆ ರು. 6 ಲಕ್ಷ ಬಳಸಿಕೊಳ್ಳಬೇಕಿದೆ ಎಂದು ಉಪಾಧ್ಯಕ್ಷ ಎಸ್. ಗುರುಶಾಂತಪ್ಪ, ಸದಸ್ಯ ತೂಲಹಳ್ಳಿ ಮಂಜುನಾಥ ಸಭೆಯ ಗಮನ ಸೆಳೆದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿರಿಬಿ ಕೊಟ್ರೇಶ್ ಹಿಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಂತೆ ಅನುದಾನ ಬಳಕೆಯಾಗಬೇಕು, ಬದಲಾವಣೆಗೆ ತಾವು ಒಪ್ಪುವುದಿಲ್ಲ ಎಂದು ಹೇಳಿ, ಮಂಜುನಾಥ್ ಅವರನ್ನು ಗುರಿಯಾಗಿಸಿಕೊಂಡು ವಾಚಮಾನಗೊಳಿಸಿ, ಹೊರ ನಡೆದರು.
ಸದಸ್ಯ ಕೊಟ್ರೇಶರ ಈ ಮಾತಿಗೆ ತೀವ್ರ ಆಕ್ಷೇಪಿಸಿದ ಸದಸ್ಯರಾದ ಕರಡಿ ಕೊಟ್ರೇಶ್, ಬುಗ್ಗಳ್ಳಿ ಕೊಟ್ರೇಶ್, ಪ್ರಭುದೇವ್ ಮಂಜುನಾಥರ ಬೆಂಬಲಕ್ಕೆ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ, ಸಭೆಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಕಿರಿಯ ಎಂಜಿನಿಯರ್ ಅರುಣ್ ಪಾಟೀಲ್ ಮತ್ತಿತರರು ಇದ್ದರು.