ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಮಸ್ಯೆ ಜೀವಂತ: ಪರಿಹಾರಕ್ಕೆ ಧಾವಂತ

Lingaraj Badiger
Updated On : 24 Oct 2013, 10:53 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 23
ಸರ್ಕಾರದ ಸೌಲಭ್ಯಗಳು ಈ ಗ್ರಾಮಸ್ಥರ ಪಾಲಿಗೆ ಶಾಪವಾಗಿ ಪರಿಣಮಿಸಿವೆ. ಇಲ್ಲಿ ಏನು ಕೇಳಿದರೂ ಇಲ್ಲಗಳದ್ದೇ ಕಾರುಬಾರು. ಚರಂಡಿ, ರಸ್ತೆ, ಮನೆ, ಶೌಚಾಲಯ ನಿರ್ಮಾಣಕ್ಕೆ ಅನುಮತಿಯೇ ಇಲ್ಲ. ಇವರ ಪಾಲಿಗೆ ಸರ್ಕಾರವೇ ಇಲ್ಲವಾಗಿದೆ.
ಹೌದು, ಇಂತಹ ಕೊಳಗೇರಿಯಂತಹ ಸ್ಥಿತಿಯಲ್ಲಿ ತಾಲೂಕಿನ ಮಾಗಳ ಗ್ರಾಮದ ಬಸ್ತಿ ಓಣಿ, ಬ್ಯಾಡರಗೇರಿ ಸಂತ್ರಸ್ತರ ಬದುಕು ಸಾಗಿದೆ. ಬಯಲು ಶೌಚಾಲಯದ ಬದಲು ಮನೆಗೊಂಡು ಶೌಚ ನಿರ್ಮಿಸಲು ಕೇಂದ್ರ, ರಾಜ್ಯ ಸರ್ಕಾರ ನೀಡಿರುವ ರು. 10 ಸಾವಿರ ಸೌಲಭ್ಯ ಪಡೆಯಲು ನೂರಾರು ಅರ್ಜಿಗಳು ಬಂದರೂ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯಿತಿ ಅನುಮತಿ ಇಲ್ಲದ ಕಾರಣ ಬಸವ ವಸತಿ ಯೋಜನೆ ಮನೆಗಳು ವಾಪಸ್ ಹೋಗಿವೆ. ಗ್ರಾಮದ ಬಸ್ತಿ ಓಣಿ, ಬ್ಯಾಡರಗೇರಿಗಳು ಸಿಂಗಟಾಲೂರು ಏತನೀರಾವರಿ ಯೋಜನೆ ಹತ್ತಿರದಲ್ಲಿವೆ. ಪ್ರಕೃತಿ ವಿಕೋಪ ಹಾಗೂ ಬತ್ತದ ಗದ್ದೆಯ ಬಸಿ ನೀರು ವಾಸದ ಮನೆಗಳಲ್ಲಿ ಬಂದು ಸೇರಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆ, ವಿದ್ಯುತ್, ಮೂಲ ಸೌಲಭ್ಯಗಳಿಲ್ಲ.
ಈ ಗ್ರಾಮದ ವಾಸ್ತವ ಸ್ಥಿತಿಯನ್ನು ಅರಿಯಲು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಜಿಲ್ಲಾಧಿಕಾರಿಯವರಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಸೂಚಿಸಿದ್ದರು. ಆದರೆ ಡಿಸಿ ಬದಲಾಗಿ ಎಸಿ ಬಂದು ಗ್ರಾಮಸ್ಥರ ಬೇಡಿಕೆ ಹಾಗೂ ವಾಸ್ತವತೆ ಕುರಿತು ಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ತಿಂಗಳಾದರೂ ಯಾವುದೇ ಕ್ರಮವಿಲ್ಲ. ಆದರೆ ಸಂತ್ರಸ್ತರು ತಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಧಾವಂತದಲ್ಲಿದ್ದಾರೆ.
ನವಗ್ರಾಮ ಆಸರೆ ಯೋಜನೆಯಡಿ ಸ್ಥಳಾಂತರ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಾರದು, ಬಸವ ವಸತಿ, ಶೌಚ, ರಸ್ತೆ, ಚರಂಡಿ, ಹೊಸ ಮನೆ ನಿರ್ಮಾಣ ಸೇರಿದಂತೆ ಯಾವುದಕ್ಕೂ ಗ್ರಾಪಂ ಅನುಮತಿ ನೀಡಬಾರದೆಂದು ಆದೇಶವಿದೆ. ಅತ್ತ ಆಸರೆಯೂ ಇಲ್ಲ, ಇತ್ತ ಮೂಲ ಗ್ರಾಮದಲ್ಲಿ ಅಭಿವೃದ್ಧಿ ಇಲ್ಲದೆ ಸಂತ್ರಸ್ತರು ಅತಂತ್ರರಾಗಿದ್ದಾರೆ.
ಗ್ರಾಮಸ್ಥರ ಬೇಡಿಕೆಗಳು: ಮಾಗಳ ಗ್ರಾಮವನ್ನು ಸಂಪೂರ್ಣ ಮುಳುಗಡೆ ಪ್ರದೇಶವೆಂದು ಘೋಷಿಸಬೇಕು. ಪುನರ್ ವಸತಿ, ಪುನರ್ ನಿರ್ಮಾಣದಂತೆ ಈಗಿನ ಮನೆಗಳ ಅಳತೆಗೆ ತಕ್ಕಂತೆ ನಿವೇಶನ ಹಾಗೂ ಮನೆಗಳ ನಿರ್ಮಾಣಕ್ಕೆ ಮೌಲ್ಯಧಾರಿತ ಪರಿಹಾರ ನೀಡಬೇಕು. ನವಗ್ರಾಮದ ಮನೆಗಳು ಉತ್ತಮ ಗುಣಮಟ್ಟ ಹೊಂದದೆ, ಅತಿ ಚಿಕ್ಕ ಮನೆಗಳಿದ್ದು, ಆಸರೆ ಯೋಜನೆಯಲ್ಲಿ ಸ್ಥಳಾಂತರಕ್ಕೆ ಒಮ್ಮತವಿಲ್ಲ. ಪುನರ್ ವಸತಿ, ಪುನರ್ ನಿರ್ಮಾಣ ಘೋಷಣೆ ಆಗುವವರೆಗೂ ಬಸ್ತಿ ಓಣಿ, ಬ್ಯಾಡರಗೇರಿಯಲ್ಲಿ ಬೀದಿದೀಪ, ಶೌಚಾಲಯ, ರಸ್ತೆ, ಚರಂಡಿಗಳನ್ನು ಗ್ರಾಪಂ ವ್ಯವಸ್ಥಿತವಾಗಿ ಪೂರೈಕೆ ಮಾಡಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
ತನಿಖೆಯಿಂದ ಕಂಡುಬಂದ ಅಂಶಗಳು: ಈ ಹಿಂದೆ ಮಾಡಿದ್ದ ಸರ್ವೇ ಸಂದರ್ಭದಲ್ಲಿ ವೈಜ್ಞಾನಿಕ ಆಧಾರದ ಮೇಲೆ ಪೂರ್ಣ ಗ್ರಾಮ ಸ್ಥಳಾಂತರಿಸುವ ಅವಶ್ಯಕತೆ ಇಲ್ಲ, ಭಾಗಶಃ ಸ್ಥಳಾಂತರಿಸುವುದು. ಕೂಡಲೇ 563 ಕುಟುಂಬಗಳನ್ನು ಸ್ಥಳಾಂತರಿಸಬೇಕು, 100 ಮನೆಗಳು ಪೂರ್ಣಗೊಂಡಿವೆ. 162 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಕೊಳಚೆ ನಿರ್ಮೂಲನಾ ಮಂಡಳಿಗೆ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ನವಗ್ರಾಮದ ಮನಗಳಿಗೆ ನೀರು ಸರಬರಾಜು, ರಸ್ತೆ ಸಂಪರ್ಕ, ಒಳಚರಂಡಿ, ಕಾಮಗಾರಿ ಕೈಗೊಳ್ಳಬೇಕೆಂದು ಎಸಿ ಸುನೀಲ್ ಕುಮಾರ್ ಡಿಸಿಗೆ ವರದಿ ಸಲ್ಲಿಸಿದ್ದಾರೆ.
ಈ ಗ್ರಾಮದ ಪ್ರದೇಶ ತೀರಾ ಹಿಂದುಳಿದಿದೆ. ಬಸಿನೀರು ಮನೆಯೊಳಗೆ ಇರುವುದರಿಂದ ವಾಸಕ್ಕೆ ಯೋಗ್ಯವಾಗಿಲ್ಲ. ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆ ಇದ್ದು, ರಸ್ತೆಗಳು ಬಸಿ ನೀರಿನಿಂದ ಕೊಳಚೆ ತಾಣಗಳಾಗಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು ಜಮೀನಿನಲ್ಲಿ ರೈತರು ಇಂದಿಗೂ ಬತ್ತ ಬೆಳೆಯುತ್ತಿದ್ದಾರೆ. ಇದನ್ನು ಸುಪರ್ದಿಗೆ ಪಡೆದುಕೊಂಡು ಚರಂಡಿ ವ್ಯವಸ್ಥೆ ಕಲ್ಪಿಸಿದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದಂತಾಗುತ್ತದೆ ಎಂದು ವಿವರಿಸಿದ್ದಾರೆ.
- ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement