ಹೊಸಪೇಟೆ ರೇಲ್ವೆ ನಿಲ್ದಾಣ ಮೇಲ್ದರ್ಜೆಗೆ: ಸ್ವಾಗತ
ಹೊಸಪೇಟೆ: ರೇಲ್ವೆ ಸಚಿವಾಲಯ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ದೇಶದಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿರುವ 24 ರೇಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಯಡಿ ರಾಜ್ಯದಲ್ಲಿ ಹೊಸಪೇಟೆ ರೇಲ್ವೆ ನಿಲ್ದಾಣವನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ವಿಭಾಗೀಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆ ಅನುಷ್ಠಾನಗೊಳಿಸುವಾಗ ರೇಲ್ವೆ ನಿಲ್ದಾಣದಿಂದ 1 ಕಿ.ಮೀ. ಅಂತರದಲ್ಲಿರುವ ಅನಂತಶಯನಗುಡಿ ರೇಲ್ವೆ ಗೇಟ್ (ಎಲ್.ಸಿ. ಗೇಟ್ ನಂ. 85 ) ಮೇಲ್ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ತ್ವರಿತವಾಗಿ ಹಂಪಿಗೆ ತಲುಪುವಂತಾಗಲು ಈಗಾಗಲೇ ಕನಕದಾಸ ವೃತ್ತದ ಮೂಲಕ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಆದರೆ ಅನಂತಶಯನಗುಡಿ ಗೇಟಿಗೆ ಮೇಲ್ಸೇತುವೆ ಇಲ್ಲದಿರುವುದರಿಂದ ವಾಹನಗಳು ಮತ್ತು ಪ್ರವಾಸಿಗರು ರೇಲ್ವೆ ಹಳಿ ದಾಟಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇಲ್ಲಿಂದ ಹಾದು ಹೋಗಿರುವ ಜೋಡಿ ರೈಲು ಮಾರ್ಗದ ಮೂಲಕ ಪ್ರತಿದಿನ 20 ಪ್ರಯಾಣಿಕರ ರೈಲುಗಳು ಹಾಗೂ ಅಧಿಕ ಸಂಖ್ಯೆಯಲ್ಲಿ ಗೂಡ್ಸ್ ಗಾಡಿಗಳು ಸಂಚರಿಸುತ್ತವೆ. ಶಿವಮೊಗ್ಗ-ರಾಯಚೂರು ರಾಜ್ಯ ಹೆದ್ದಾರಿಯೂ ಇಲ್ಲಿಂದಲೇ ಹಾದು ಹೋಗುತ್ತದೆ. ಗೇಟ್ ಮುಚ್ಚಿದ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ತುರ್ತಾಗಿ ಆಸ್ಪತ್ರೆಗೆ ತೆರಳುವ ರೋಗಿಗಳು, ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಮೇಲ್ಸೆತುವೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೇಲ್ಸೇತುವೆ ನಿರ್ಮಾಣ ಕಾರ್ಯವು ಕೇವಲ ರೇಲ್ವೆ ಇಲಾಖೆಯ ಜವಾಬ್ದಾರಿಯಲ್ಲ. ರಾಜ್ಯ ಸರ್ಕಾರವೂ ಕಾಮಗಾರಿ ವೆಚ್ಚದಲ್ಲಿ ಅರ್ಧದಷ್ಟು ಹಣ ಭರಿಸಿ ರೇಲ್ವೆ ಗೇಟಿನ ಎರಡೂ ಬದಿಯಲ್ಲಿ ಅಗತ್ಯವಾದ ಜಮೀನು ನೀಡಬೇಕಾಗುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ರೇಲ್ವೆ ಖಾತೆ ಸಚಿವರಾಗಿರುವ ಅವಧಿಯಲ್ಲೇ ಮೇಲ್ಸೇತುವೆ ನಿಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡಬೇಕು. ಆದುದರಿಂದ ಬಳ್ಳಾರಿ ಜಿಲ್ಲಾಡಳಿತ ಮತ್ತು ರೇಲ್ವೆ ಇಲಾಖೆ ಅಧಿಕಾರಿಗಳು ತಕ್ಷಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಮೇಲ್ಸೆತುವೆ ಕಾಮಗಾರಿಯನ್ನು ಕೈಗೊಳ್ಳಲು ಸಮಿತಿ ಸದಸ್ಯರಾದ ವೈ. ಯಮುನೇಶ್, ಕೆ. ಮಹೇಶ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.