ಕೊಟ್ಟೂರು- ಹರಿಹರ ರೈಲಿಗೆ ಮತ್ತೆ ವಿಘ್ನ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಅ. 24
ಮಧ್ಯ ಕರ್ನಾಟಕ ಜನತೆಯ ದಶಕಗಳ ಕನಸಾದ ಕೊಟ್ಟೂರು-ಹರಿಹರ ರೈಲು ಮಾರ್ಗದ ಕಾಮಗಾರಿ ಇನ್ನೇನು ಮುಗಿದು ಸುಗಮ ರೈಲು ಸಂಚಾರ ಆರಂಭವಾಗುತ್ತದೆ ಎನ್ನುವಷ್ಟರಲ್ಲಿಯೇ ಇದಕ್ಕೆ ಹರಿಹರ ತಾಲೂಕಿನ ರೈತರು ಅಡ್ಡಿಪಡಿಸುತ್ತ ವಿಘ್ನ ತಂದೊಡ್ಡಿದ್ದಾರೆ. ಇದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ರೈಲು ಸಂಚಾರ ಮತ್ತೆ ನೆನೆಗುದಿಗೆ ಬೀಳುವ ಅಪಾಯ ಎದುರಾದಂತಾಗಿದೆ.
ದಾವಣಗೆರೆ ಜಿಲ್ಲೆ ಹರಿಹರದ ಬಳಿ ಕೇವಲ 10 ಕಿ.ಮೀ. ಮಾರ್ಗದ ಕಾಮಗಾರಿಯಲ್ಲಿ ಆ ಭಾಗದ ರೈತರು ಕಾಮಗಾರಿಗೆ ವಶಪಡಿಸಿಕೊಂಡ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಪದೇ ಪದೇ ಅಡ್ಡಿ ಉಂಟು ಮಾಡುವುದನ್ನು ಇದುವರೆಗೂ ಮುಂದುವರೆಸಿದ್ದಾರೆ. ಮಂಗಳವಾರ ಸಹ ಹರಿಹರ ತಾಲೂಕಿನ ಗಂಗನರಸಿ ರೈತರು ರೈಲು ಮಾರ್ಗದಲ್ಲಿ ಬಂದ ದೊಡ್ಡ ಗಾತ್ರದ ಯಂತ್ರವನ್ನು ತಡೆಹಿಡಿದು ಸೂಕ್ತ ಪರಿಹಾರ ಘೋಷಿಸುವಂತೆ ಒತ್ತಾಯಿಸಿದರು. ಹೆಚ್ಚಿನ ಪರಿಹಾರಧನ ಘೋಷಣೆಯಾಗದ ಹೊರತು ಅಳಿದುಳಿದ ಯಾವುದೇ ಕಾಮಗಾರಿಯನ್ನು ಮುಂದುವರೆಸಲು ಖಂಡಿತ ಬಿಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ರೈತರ ಈ ಹಠದ ಮುಂದೆ ಅಧಿಕಾರಿಗಳು ಕೈಕಟ್ಟಿ ನಿಲ್ಲುವಂತಾಗಿದೆ.
ರೈತರ ಹಠಮಾರಿತನ: 2010ರ ಮಾರ್ಚ್ ವೇಳೆಗೆ ಈ ಮಾರ್ಗದ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲು ರೇಲ್ವೆ ಸಚಿವಾಲಯ ಎಲ್ಲ ತಯಾರಿಸಿ ನಡೆಸಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿದೆ. ಇದೀಗ ಕೇವಲ ಸಣ್ಣಪುಟ್ಟ ಕಾಮಗಾರಿಗಳು ಮಾತ್ರ ಬಾಕಿ ಇವೆ. ಇದನ್ನೇ ಅಸ್ತ್ರವಾಗಿರಿಸಿಕೊಂಡ ಹರಿಹರ ಮತ್ತು ಹರಪ್ಪನಹಳ್ಳಿ ತಾಲೂಕಿನ ರೈತರು ಸಣ್ಣಪುಟ್ಟ ಕಾಮಗಾರಿಯನ್ನು ಕೈಗೊಳ್ಳಲು ಯಾವುದೇ ವಿಧದಲ್ಲೂ ಬಿಡದೆ ಸಂಪೂರ್ಣ ಬಂದ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಟ್ಟೂರು- ಹರಿಹರ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಗೊಂದಲ ನಿವಾರಿಸುವಂತೆ ರೈತರೊಂದಿಗೆ ದಾವಣಗೆರೆ ಜಿಲ್ಲಾಡಳಿತ ಮತ್ತು ರೇಲ್ವೆ ಇಲಾಖೆ ಅಧಿಕಾರಿಗಳು 3-4 ಸಾರಿ ಸಭೆ ನಡೆಸಿ ಕೋರಿಕೊಂಡರೂ ಪ್ರಯೋಜನವಾಗಿಲ್ಲ. ಈ ಹೊಸ ಮಾರ್ಗದಲ್ಲಿ ರೈಲು ಸಂಚಾರವನ್ನು ಬರುವ ಡಿಸೆಂಬರ್ ಅಂತ್ಯದೊಳಗೆ ಆರಂಭಿಸಬೇಕೆಂಬ ರೇಲ್ವೆ ಅಧಿಕಾರಿಗಳ ಪ್ರಯತ್ನಕ್ಕೆ ಇದೀಗ ರೈತರಿಂದಾಗಿ ಸಂಪೂರ್ಣ ಹಿನ್ನಡೆ ಉಂಟಾಗಿದೆ.
ಯೋಜನಾವೆಚ್ಚ ಹೆಚ್ಚು: 65 ಕಿ.ಮೀ. ಉದ್ದದ ಈ ಕಾಮಗಾರಿ ವೆಚ್ಚ 1996ರಲ್ಲಿ ಕೇವಲ ರು. 67 ಕೋಟಿಗೆ ನಿಗದಿಯಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ಈ ಯೋಜನಾ ವೆಚ್ಚ ಈಗ ಬರೋಬ್ಬರಿ ರು. 1000 ಕೋಟಿಗಿಂತಲೂ ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಒಪ್ಪಂದದಡಿ ಕಾಮಗಾರಿ ಆರಂಭಗೊಂಡಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ 1:3ರ ಅನುದಾನದಲ್ಲಿ ಇದುವರೆಗೂ ರು. 100 ಕೋಟಿಗೂ ಹೆಚ್ಚು ಹಣ ಅನುದಾನ ನೀಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 2:3 ಅನುದಾನದಲ್ಲಿ ರು. 90 ಕೋಟಿಗಿಂತ ಅಧಿಕ ಹಣ ಭರಿಸಿದೆ.
ಇಚ್ಛಾಶಕ್ತಿ ಕೊರತೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಧಾನಗತಿಯ ತೀರ್ಮಾನ ಮತ್ತು ಎರಡು ಜಿಲ್ಲೆಗಳ ಸಂಸದರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ರೈಲು ಮಾರ್ಗದ ಕಾಮಗಾರಿ ವಿಳಂಬವಾಗುತ್ತಲೇ ಸಾಗಿದೆ. ಹೀಗಾಗಿ ಬಹುನಿರೀಕ್ಷಿತ ಈ ರೈಲು ಮಾರ್ಗದ ಕಾಮಗಾರಿ ಪದೇ ಪದೇ ನಿರಾಯಾಸವಾಗಿ ತನ್ನ ಮುಕ್ತಾಯದ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇದೆ. ಜನಪ್ರತಿನಿಧಿಗಳ ಧ್ವನಿಯೂ ಇತ್ತೀಚಿನ ದಿನಗಳಲ್ಲಿ ಈ ಮಾರ್ಗದ ಅನುಷ್ಠಾನಕ್ಕೆ ಅಷ್ಟಾಗಿ ಕೇಳಿ ಬಾರದೆ ಇರುವುದು ದೊಡ್ಡ ದುರಂತವಾಗಿದೆ.
ಕೊಟ್ಟೂರು-ಹರಿಹರ ರೈಲು ಮಾರ್ಗದ ಸಣ್ಣ ಪ್ರಮಾಣದ ಕಾಮಗಾರಿಗೆ ದೊಡ್ಡ ಯಂತ್ರವನ್ನು ಗಂಗನರಸಿ ಬಳಿಯ ಕಾಮಗಾರಿಯಲ್ಲಿ ಬಳಸಿಕೊಳ್ಳಲು ಮುಂದಾಗುತ್ತಿದ್ದಂತೆಯೇ ಮಂಗಳವಾರ ಅಲ್ಲಿನ ರೈತರು ದೊಡ್ಡ ಪ್ರಮಾಣದಲ್ಲಿ ಗಲಾಟೆ ಎಬ್ಬಿಸಿ ತಡೆಯೊಡ್ಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಕಾಮಗಾರಿ ಜರುಗಲು ಅವಕಾಶಕೊಡಿ ಎಂದು ಎಷ್ಟೇ ಮನವೊಲಿಸಿದರು ರೈತರು ತಮ್ಮ ಪಟ್ಟು ಬಿಡಲಿಲ್ಲ. ಹೀಗಾಗಿ ತಾವು ಏನೂ ಮಾಡುವುದು ಎಂದು ತಿಳಿಯದೇ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ ಎಂದು ನೈಋತ್ಯ ರೇಲ್ವೆ ವಲಯದ ಉಪಮುಖ್ಯ ಎಂಜಿನಿಯರ್ ಬನ್ಸೋಡ್ 'ಕನ್ನಡಪ್ರಭ'ದ ಬಳಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಪದೇ ಪದೇ ಅಡ್ಡಿ
ದಾವಣಗೆರೆ ಜಿಲ್ಲೆ ಹರಿಹರದ ಬಳಿ ಕೇವಲ 10 ಕಿ.ಮೀ. ಮಾರ್ಗದ ಕಾಮಗಾರಿಯಲ್ಲಿ ಆ ಭಾಗದ ರೈತರು ಕಾಮಗಾರಿಗೆ ವಶಪಡಿಸಿಕೊಂಡ ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಪದೇ ಪದೇ ಅಡ್ಡಿ ಉಂಟು ಮಾಡುವುದನ್ನು ಇದುವರೆಗೂ ಮುಂದುವರೆಸಿದ್ದಾರೆ.
ರೈತರ ಹಠ
ಹೆಚ್ಚಿನ ಪರಿಹಾರಧನ ಘೋಷಣೆಯಾಗದ ಹೊರತು ಅಳಿದುಳಿದ ಯಾವುದೇ ಕಾಮಗಾರಿಯನ್ನು ಮುಂದುವರೆಸಲು ಖಂಡಿತ ಬಿಡುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ರೈತರ ಈ ಹಠದ ಮುಂದೆ ಅಧಿಕಾರಿಗಳು ಕೈಕಟ್ಟಿ ನಿಲ್ಲುವಂತಾಗಿದೆ.
ಯೋಜನಾ ವೆಚ್ಚ ಹೆಚ್ಚಳ
65 ಕಿ.ಮೀ. ಉದ್ದದ ಈ ಕಾಮಗಾರಿ ವೆಚ್ಚ 1996ರಲ್ಲಿ ಕೇವಲ ರು. 67 ಕೋಟಿಗೆ ನಿಗದಿಯಾಗಿತ್ತು. ಕಾಮಗಾರಿ ವಿಳಂಬದಿಂದಾಗಿ ಈ ಯೋಜನಾ ವೆಚ್ಚ ಈಗ ಬರೋಬ್ಬರಿ ರು. 1000 ಕೋಟಿಗಿಂತಲೂ ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಒಪ್ಪಂದದಡಿ ಕಾಮಗಾರಿ ಆರಂಭಗೊಂಡಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ 1:3ರ ಅನುದಾನದಲ್ಲಿ ಇದುವರೆಗೂ ರು. 100 ಕೋಟಿಗೂ ಹೆಚ್ಚು ಹಣ ಅನುದಾನ ನೀಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 2:3 ಅನುದಾನದಲ್ಲಿ ರು. 90 ಕೋಟಿಗಿಂತ ಅಧಿಕ ಹಣ ಭರಿಸಿದೆ.
- ಜಿ. ಸೋಮಶೇಖರ್