ಸಮಸ್ಯೆಗಳ ಆಗರ ವಿಶಾಲನಗರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 25
ಮಳೆ, ಚರಂಡಿ ನೀರೆಲ್ಲ ಖಾಲಿ ನಿವೇಶನದಲ್ಲಿ ನಿಂತು ಕೆರೆಯಂತಾಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ರಸ್ತೆ ಅಭಿವೃದ್ಧಿಪಡಿಸದೇ ಖಾಲಿ ಬಿಟ್ಟಿರುವುದು ನಗರದ 16ನೇ ವಾರ್ಡ್ ವ್ಯಾಪ್ತಿಗೆ ಬರುವ ವಿಶಾಲನಗರದ 5ನೇ ಕೀಲು ರಸ್ತೆಯ ನಿವಾಸಿಗಳಿಗೆ ನಿತ್ಯದ ಗೋಳಾಗಿ ಪರಿಣಮಿಸಿದೆ.
ಇಲ್ಲಿನ ವಿಶಾಲನಗರದ ಮುಖ್ಯರಸ್ತೆ ಹಾಗೂ ಹನುಮಾನ ನಗರ 7ನೇ ಕ್ರಾಸ್ನ ರಸ್ತೆಗಳನ್ನು ಟಾರ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಇದು ಮತ್ತೊಂದು ಸಮಸ್ಯೆಗೆ ನಾಂದಿಯಾಗಿದ್ದು, ರಸ್ತೆಗಳನ್ನು ಅಂದಾಜು 2 ಅಡಿಯಷ್ಟು ಎತ್ತರಗೊಳಿಸಲಾಗಿದೆ. ಹೀಗಾಗಿ, ಮೊದಲಿದ್ದ ಚರಂಡಿಗಳೆಲ್ಲ ಮುಚ್ಚಿರುವುದರಿಂದ ಮಳೆ ಹಾಗೂ ಕೊಳಚೆ ನೀರು ಚರಂಡಿಯಲ್ಲಿ ಹರಿದು ಹೋಗದೇ ಖಾಲಿ ನಿವೇಶನದಲ್ಲಿ ಸಂಗ್ರಹವಾಗುತ್ತಿದೆ. ಅಲ್ಲದೆ, ಮಧ್ಯದಲ್ಲಿರುವ ಒಳಚರಂಡಿಯ ಚೇಂಬರ್ಗಳಿಂದಲೂ ನೀರು ಹೊರಹೊಮ್ಮುತ್ತಿದೆ. ಈ ಎಲ್ಲ ನೀರು ಒಂದೆಡೆ ಸಂಗ್ರಹವಾಗಿರುವುದರಿಂದ ಗಬ್ಬು ವಾಸನೆ ಬೀರುತ್ತಿವೆ.
ರೋಗ ಭೀತಿ: ಖಾಲಿ ನಿವೇಶನಗಳಲ್ಲಿರುವ ನೀರು ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿರುವುದರಿಂದ ಸಂಜೆಯಾಗುತ್ತಲೇ ಸೊಳ್ಳೆಗಳು ಮನೆಗೆ ನುಗ್ಗುತ್ತವೆ. ಇದರಿಂದಾಗಿ ಮಲೇರಿಯಾ, ಡೆಂಘೀ, ಟೈಫಾಯಿಡ್ನಂತಹ ಮಾರಕ ರೋಗಗಳ ಹರಡುವ ಭೀತಿ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಇಲ್ಲಿ ಸ್ವಂತ ಮನೆಕಟ್ಟಿಕೊಂಡ ಕೆಲವು ನಿವಾಸಿಗಳು ಮನೆ ಖಾಲಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು, ಕುಟುಂಬದ ಸದಸ್ಯರನ್ನು ಬೇರೆ ಊರುಗಳಿಗೆ ಕಳುಹಿಸಿಕೊಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಭಯದ ವಾತಾವರಣ: ಖಾಲಿ ನಿವೇಶನದಲ್ಲಿ ಸುಮಾರು ಎರಡೂವರೆ ಅಡಿಗಿಂತಲೂ ಅಧಿಕ ಪ್ರಮಾಣದಲ್ಲಿ ಕೊಳಚೆ ನೀರು ನಿಂತು ಹಸಿರು ಪಾಚಿಕಟ್ಟಿರುವುದರಿಂದ ದುರ್ವಾಸನೆ ಬೀರುತ್ತಿದೆ. ಜತೆಗೆ ಹಾವು, ಚೇಳುಗಳಂಥ ವಿಷ ಜಂತುಗಳಿಗೆ ಹೇಳಿ ಮಾಡಿಸಿದಂತಹ ಜಾಗವಾಗಿದೆ. ಇದರಿಂದಾಗಿ ಸುತ್ತಲಿನ ನಿವಾಸಿಗಳು ಭಯದಿಂದಲೇ ಕಾಲ ಮುಂದೂಡುವಂತಾಗಿದೆ. ಅಲ್ಲದೇ ನಿಂತ ನೀರಿನಿಂದಾಗಿ ಕಟ್ಟಡಗಳ ತಡೆಗೋಡೆಗಳು ಶಿಥಿಲಗೊಳ್ಳುತ್ತಿದ್ದು, ಯಾವಾಗ ಕುಸಿಯುತ್ತವೆಯೋ ಎಂಬಂತಹ ಸ್ಥಿತಿ ಸೃಷ್ಟಿಯಾಗಿದೆ.
ರಸ್ತೆ ಅಭಿವೃದ್ಧಿ ನಿರ್ಲಕ್ಷ್ಯ: ವಿಶಾಲನಗರ ಮುಖ್ಯರಸ್ತೆಗೆ ಕೂಡುವಂತೆ ಇಲ್ಲಿನ ಒಟ್ಟು 14 ಲಿಂಕ್ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಪರಿವರ್ತಿಸಲು ಹಣ ಮಂಜೂರಾಗಿದ್ದು, ಅದರಲ್ಲಿ 11 ಕೀಲು(ಲಿಂಕ್) ರಸ್ತೆಗಳನ್ನು ಮಾತ್ರ ಕಾಂಕ್ರೀಟ್ ಹಾಕಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ, ಉಳಿದ 3 ರಸ್ತೆಗಳಲ್ಲಿ ಎರಡು ರಸ್ತೆಗಳ ಕಾಮಗಾರಿಗೆ ಮಾತ್ರ ಅಲ್ಲಿನ ನಿವಾಸಿಗಳ ಒತ್ತಾಯದಿಂದ ಮಣ್ಣು ಹಾಕಲಾಗಿದ್ದರೆ, ಇನ್ನು 5ನೇ ಕೀಲು ರಸ್ತೆಗೆ ಕನಿಷ್ಠ ಮಣ್ಣನ್ನು ಹಾಕದೇ ಖಾಲಿ ಬಿಡಲಾಗಿದೆ. ಈ ಕುರಿತು ಸಂಬಂಧಪಟ್ಟ ಎಂಜಿನಿಯರ್, ಇತರರನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.
ರಸ್ತೆ ಇರದ ಕಾರಣ ನಿತ್ಯ ವಾಹನಗಳ ಸಂಚಾರಕ್ಕೆ ತೊಂದರೆಯುಂಟಾಗಿದ್ದು, ಜತೆಗೆ ಮಳೆ ಬಂದಾಗ ನೀರು ನಿಲ್ಲುವುದರಿಂದ ಕೆಸರು ರಸ್ತೆಗಳು ಗದ್ದೆಯಂತಾಗಿ ಮಾರ್ಪಾಡಾಗುತ್ತದೆ. ಒಟ್ಟು 14 ಲಿಂಕ್ ರಸ್ತೆಗಳಲ್ಲಿ 5ನೇ ಲಿಂಕ್ ರಸ್ತೆಯನ್ನು ಖಾಲಿ ಬಿಡುವುದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಾರೆ ಇಲ್ಲಿನ ನಿವಾಸಿಗಳು.
ಈ ಕುರಿತಂತೆ ಈಗಾಗಲೇ 5ನೇ ಲಿಂಕ್ ರಸ್ತೆ ನಿವಾಸಿಗಳು ಜಿಲ್ಲಾಧಿಕಾರಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಎರಡ್ಮೂರು ದಿನಗಳಲ್ಲಿ ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿರುವುದಾಗಿ ಇಲ್ಲಿನ ನಿವಾಸಿಗಳು ಹೇಳಿದ್ದಾರೆ.
ಒಳಚರಂಡಿ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿ, ನಿಂತ ಕೊಳಚೆ ನೀರನ್ನು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು ಹಾಗೂ 5ನೇ ಲಿಂಕ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಬೇಕು ಎಂಬುದು ಇಲ್ಲಿನ ನಿವಾಸಿಗಳಾದ ಕೆ.ಎನ್. ನಾಗರಾಜ್, ಮಹ್ಮದ್ ಇಕ್ಬಾಲ್, ಅರೀಫ್, ಭೀಮಪ್ಪ, ಕೆ. ತಿಪ್ಪೇರುದ್ರಯ್ಯ, ನಾಗರಾಜ್, ಮೆಹಬೂಬಸಾಬ್ ಆಗ್ರಹವಾಗಿದೆ.
-ವೈ.ಎಂ. ಸಿದ್ದಲಿಂಗಸ್ವಾಮಿ