ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸೋಮಪ್ಪ ಕೆರೆ ಏರಿ ಮೇಲಿನ ಕಟ್ಟಡ ತೆರವು

Lingaraj Badiger
Updated On : 26 Oct 2013, 10:48 am

ಕನ್ನಡಪ್ರಭ ವಾರ್ತೆ, ಕಂಪ್ಲಿ, ಅ. 25
ನೆನೆಗುದಿಗೆ ಬಿದ್ದಿದ್ದ ಕಂಪ್ಲಿ ಐತಿಹಾಸಿಕ ಸೋಮಪ್ಪ ಕೆರೆ ಏರಿ ಮೇಲಿನ 40 ವಾಣಿಜ್ಯ ಕಟ್ಟಡಗಳನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಶುಕ್ರವಾರ ಎಸಿ ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ತೆರವು ಮಾಡಲಾಯಿತು.
ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮತ್ತು ನಟರಾಜ ಕಲಾ ವಿಜಯ ಸಂಘದ ಹತ್ತಿರದ ಆಂಜನೇಯ ದೇವಸ್ಥಾನದ ವರೆಗಿನ ಎಲ್ಲ ವಾಣಿಜ್ಯ ಕಟ್ಟಡಗಳ ನಿವಾಸಿಗಳಿಗೆ ಜಿಲ್ಲಾಧಿಕಾರಿ ಆದೇಶದಂತೆ, ಮುಂಗಡವಾಗಿ ನೊಟೀಸ್ ನೀಡಿದ್ದರಿಂದ ಶುಕ್ರವಾರ ಬೆಳಗ್ಗೆ 6ರಿಂದ ಸುಗಮವಾಗಿ ತೆರವು ಕಾರ್ಯಾಚರಣೆ ನಡೆಯಿತು.
ಈ ಸಂದರ್ಭದಲ್ಲಿ ಎಸಿ ಪಿ. ಸುನೀಲ್‌ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಐತಿಹಾಸಿಕ ಸೋಮಪ್ಪ ಕೆರೆ ವ್ಯಾಪ್ತಿಯಲ್ಲಿ ಬರುವ 42 ವಾಣಿಜ್ಯ ಕಟ್ಟಡಗಳಲ್ಲಿ 40 ವಾಣಿಜ್ಯ ಕಟ್ಟಡಗಳನ್ನು ಮೊದಲ ಹಂತದಲ್ಲಿ ತೆರವುಗೊಳಿಸಲಾಗುತ್ತಿದೆ. ನಟರಾಜ ಕಲಾ ವಿಜಯ ಸಂಘ ಮತ್ತು ಪೆಟ್ರೋಲ್ ಬಂಕ್‌ಗೆ ನೋಟಿಸ್ ನೀಡಲಾಗುವುದು. ಪೆಟ್ರೋಲ್ ಬಂಕ್ ಸೋಮಪ್ಪ ಕೆರೆ ವ್ಯಾಪ್ತಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ನವೀಕರಣ ಮಾಡಿಲ್ಲ. ನಟರಾಜ ಕಲಾ ವಿಜಯ ಸಂಘದವರು ಎನ್‌ಎ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಅವರಲ್ಲಿರುವ ದಾಖಲೆಗಳನ್ನು ಸಲ್ಲಿಸಲು ತಿಳಿಸಿದ್ದೇವೆ. ಸೋಮಪ್ಪ ಕೆರೆ ವ್ಯಾಪ್ತಿಯಲ್ಲಿ 234 ನಿವಾಸಿಗಳಿದ್ದು, ಅವರೆಲ್ಲರ ಮನವೊಲಿಸಿ 2ನೇ ಹಂತದಲ್ಲಿ ಅವರೆಲ್ಲರ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆ ನಡೆಸಲಾಗುವುದು. ಅವರೆಲ್ಲರಿಗಾಗಿ ಈಗಾಗಲೇ 234 ನಿವೇಶನಗಳನ್ನು ಮತ್ತು ಹಕ್ಕುಪತ್ರಗಳನ್ನು ಸಿದ್ಧ ಮಾಡಿದ್ದು, ಎಲ್ಲರಿಗೂ ಹಕ್ಕು ಪತ್ರ ವಿತರಿಸಲಾಗುವುದು. ತೆರವು ಕಾರ್ಯಾಚರಣೆ ಅನಂತರ ಯಾರಾದರು ಪುನಃ ಕೆರೆ ಆಕ್ರಮಿಸಿಕೊಂಡರೆ ಅವರ ವಿರುದ್ಧ ದೂರು ದಾಖಲು ಮಾಡುವುದರ ಮೂಲಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಪಿಐ ಆರ್. ಹನುಮಂತಪ್ಪ ಮಾತನಾಡಿ, ತೆರವು ಕಾರ್ಯಾಚರಣೆಗೆ ಓರ್ವ ಡಿವೈಎಸ್ಪಿ, ಮೂವರು ಸಿಪಿಐ, 12 ಪಿಎಸ್‌ಐ, 12 ಎಎಸ್‌ಐ, 2 ಡಿಆರ್, 1 ಕ್ಯುಆರ್‌ಟಿ, 3 ವೀಡಿಯೋ ಗ್ರಾಫರ್, 1 ಆಂಬುಲೆನ್ಸ್, 1 ಅಗ್ನಿ ಶಾಮಕದಳ ಸೇರಿ ಒಟ್ಟು 250 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರಶ್ಮಿ ಬಿ. ಪರೆಡ್ಡಿ, ಹೊಸಪೇಟೆ ತಹಸೀಲ್ದಾರ್ ರಮೇಶ ಕೋನರೆಡ್ಡಿ, ಹೂವಿನ ಹಡಗಲಿ ತಹಸೀಲ್ದಾರ್ ವಿಜಯಕುಮಾರ್, ಪ್ರೊಬೆಶನರಿ ತಹಸೀಲ್ದಾರ್ ನಿತೀಶ್ ಪಾಟೀಲ್, ಕಮಲಾಪುರ ನೀರಾವರಿ ಇಲಾಖೆ ಎಇಇ ಡಿ.ಎನ್. ಕುಲಕರ್ಣಿ, ಎಇ ಪುರುಷೋತ್ತಮ, ಜೆಇ ಸತ್ಯನಾರಾಯಣ, ಜೆಇ ಸುರೇಶ, ಜೆಇ ದೇವೇಂದ್ರಪ್ಪ, ನಾಡ ತಹಸೀಲ್ದಾರ್ ಕೆ. ಬಾಲಪ್ಪ, ಕಂದಾಯ ಅಧಿಕಾರಿ ರಮೇಶ ನಾಯಕ, ಜೆಸ್ಕಾಂ ಎಇ ಶ್ರೀನಿವಾಸರಾಜು, ಎಇ ಮೋಹನ್‌ಬಾಬು, ಪಿಎಸ್‌ಐ ಡಿ. ಹುಲುಗಪ್ಪ, ಕ್ರೈಮ್ ಪಿಎಸ್‌ಐ ದೊಡ್ಡಣ್ಣ, ಪುರಸಭೆ ಮುಖ್ಯಾಧಿಕಾರಿ ಜಿ. ಪಂಪಾಪತಿ ನಾಯ್ಕ, ಕಂದಾಯ ನಿರೀಕ್ಷಕ ಎಸ್.ಆರ್. ಫಣಿರಾಜ್, ವ್ಯವಸ್ಥಾಪಕ ರಮೇಶ ಬಡಿಗೇರ, ಹಿರಿಯ ನೈರ್ಮಲ್ಯ ನಿರೀಕ್ಷಕ ಫಕ್ರುದ್ದೀನ್, ಬಿ. ಗೋಪಾಲ್ ಇದ್ದರು.
ಕಂದಾಯ, ಪೊಲೀಸ್, ನೀರಾವರಿ, ಪುರಸಭೆ, ಆರೋಗ್ಯ ಹಾಗೂ ಜೆಸ್ಕಾಂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement