ಹೊಸಪೇಟೆಯಲ್ಲಿ ಮಳೆ
ಹೊಸಪೇಟೆ: ತಾಲೂಕಿನಾದ್ಯಂತ ಎರಡು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಶುಕ್ರವಾರ ಬೆಳಗ್ಗೆ ಏಕಾಏಕಿಯಾಗಿ ಸುಮಾರು ಒಂದು ತಾಸು ಭಾರಿ ಮಳೆ ಸುರಿಯಿತು. ಈ ಮಳೆ ಕೆಲ ಬೆಳೆಗಳಿಗೆ ಅನುಕೂಲಕರವಾಗಿದ್ದರೆ ಇನ್ನು ಕೆಲವು ಬೆಳೆಗಳಿಗೆ ಹಾನಿ ಉಂಟುಮಾಡಿದೆ. ಹೀಗಾಗಿ ರೈತರಲ್ಲಿ ಮಿಶ್ರ ಭಾವನೆ ವ್ಯಕ್ತವಾಗಿದೆ.
ತಾಲೂಕಿನಲ್ಲಿ ಈಗಾಗಲೇ ಬತ್ತ ಕಟಾವಿಗೆ ಬಂದಿದ್ದು, ಈಗ ಸುರಿದ ಮಳೆ ಹಾನಿಯನ್ನುಂಟು ಮಾಡಿದೆ. ಹಾಗಾಗಿ ಕಂಪ್ಲಿ, ಕಮಲಾಪುರ, ಹೊಸಪೇಟೆ ರೈತರು ಮಳೆಯನ್ನು ಶಪಿಸುತ್ತಿದ್ದಾರೆ. ಆದರೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ಸೇರಿದಂತೆ ಗಾದಿಗನೂರು, ಪಾಪಿನಾಯಕನಹಳ್ಳಿ ಇತರ ಪ್ರದೇಶಗಳಲ್ಲಿ ಹಿಂಗಾರು ಬೆಳೆಗೆ ಈ ಮಳೆ ಅನುಕೂಲ ಮಾಡಿಕೊಟ್ಟಿದೆ. ಒಣಗುತ್ತಿರುವ ಬೆಳೆಗೆ ಮರುಜೀವ ನೀಡಿದಂತಾಗಿದೆ ಎಂದು ಆ ಭಾಗದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಎರಡು-ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ವಾತಾವರಣ ತಂಪಾಗಿದೆ. ಶುಕ್ರವಾರ ನಗರದ ಬೀದಿ ವ್ಯಾಪಾರಿಗಳು ವ್ಯಾಪಾರ ಸ್ಥಗಿತಗೊಳಿಸಿ ಮನೆಗೆ ತೆರಳುವಂತಾಯಿತು. ರಸ್ತೆಯಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು, ಪಾದಚಾರಿಗಳಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಉಂಟಾಯಿತು.
ನಗರದ ಸಿದ್ದಲಿಂಗಪ್ಪ ಚೌಕಿ, ಎಸ್.ಆರ್. ನಗರ, ಅಂಬೇಡ್ಕರ್ ನಗರ, ಇಂದಿರಾ ನಗರ, ಚಿತ್ತವಾಡ್ಗಿ ಇತರ ಪ್ರದೇಶದ ತಗ್ಗುಗಳಲ್ಲಿ ಮಳೆ ನೀರು ತುಂಬಿತ್ತು.