ಕಥಾಸಂಕಲನ ಬಿಡುಗಡೆ
ಬಳ್ಳಾರಿ: ಬಳ್ಳಾರಿಯ ಕಪ್ಪಗಲ್ಲಿನ ಆರಾಧ್ಯ ಪ್ರಕಾಶನದ, ಯುವಕವಿ ಆರ್. ಶಿವರಾಂ ರಚನೆಯ 'ಮಳೆ ಮತ್ತು ಮರ' ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಜರುಗಿತು. ಹರಿಹರ ರಾಘವಾಂಕ ಕನ್ನಡ ಸಂಘದ ಅಧ್ಯಕ್ಷೆ ಎ.ಎಂ. ಜಯಶ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿವರಾಂ ಅವರ ಮಳೆ ಮತ್ತು ಮರ ಕವನ ಸಂಕಲನ ಪ್ರಕೃತಿ ಪ್ರೇಮ, ವಿದ್ಯಾಭ್ಯಾಸದ ಸಮಯದಲ್ಲಿ ಮಕ್ಕಳು ಕಲಿಯಬೇಕಾದ ಉತ್ತಮ ಮೌಲ್ಯಗಳ ಬಗ್ಗೆ ತಿಳಿಸಿದೆ ಎಂದರು.
ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಎಂ.ವಿ. ಎರುಕಲಸ್ವಾಮಿ ಕಥಾಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳ್ಳಾರಿಯ ಗ್ರಾಮೀಣ ಭಾಷೆಯಲ್ಲಿ ಬರೆಯಲ್ಪಟ್ಟಿದ್ದರಿಂದ ಕಂಥಾಸಂಕಲನ ಉತ್ತಮವಾಗಿ ಮೂಡಿಬಂದಿದೆ. ಇನ್ನೂ ಹೆಚ್ಚಿನ ಬರಹ ಅವರಿಂದ ಮೂಡಿಬರಲಿ ಎಂದು ಆಶಿಸಿದರು.
ಶಿಕ್ಷಕ ಮೆಹತಾಬ್ ಕೃತಿ ಪರಿಚಯಿಸಿದರು. ಸ.ಮಾ.ಪು. ಪಿಯು ಕಾಲೇಜು ಪ್ರಾಚಾರ್ಯ ಕೆ.ಎ. ನಾಗಭೂಷಣ, ಕಾಂಗ್ರೆಸ್ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಅರ್ಜುನ್, ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಟಿಎಚ್ಎಂ ಬಸವರಾಜ್, ಕುಂದಾಪುರ ನಾಗರಾಜ್, ಪುರುಷೋತ್ತಮಗೌಡ, ಡಾ. ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.