ಕನಕ ಬಿಟಿ ಹತ್ತಿ ವಿಫಲ: ಪರಿಹಾರಕ್ಕೆ ರೈತರ ಗಡುವು
ಹೂವಿನಹಡಗಲಿ: ಕನಕ ಬಿಟಿ ಹತ್ತಿ ಬೆಳೆ ವೈಫಲ್ಯ ಕಂಡಿದ್ದು, ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 15 ದಿನಗಳೊಳಗೆ ಸರ್ಕಾರ ಪರಿಹಾರ ಘೋಷಣೆ ಮಾಡದಿದ್ದರೆ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ತಾಲೂಕಿನ ಹೊಳಲು ಗ್ರಾಮದ ರೈತರು ಎಚ್ಚರಿಸಿದ್ದಾರೆ.
ಹೊಳಲು ಗ್ರಾಮ ವ್ಯಾಪ್ತಿಯಲ್ಲಿ ಬಿಟಿ ಹತ್ತಿ ಬಿತ್ತನೆ ಮಾಡಿದ ರೈತರು ಸಭೆ ನಡೆಸಿ, 15 ದಿನದೊಳಗಾಗಿ ರಾಜ್ಯ ಸರ್ಕಾರ ಇಲ್ಲವೇ, ಬೀಜ ಕಂಪನಿ ಮಾಲೀಕರು ಪರಿಹಾರ ಪ್ರಕಟಿಸಬೇಕು. ತಪ್ಪಿದಲ್ಲಿ ಆಮರಣಾಂತ ಉಪವಾಸ ನಡೆಸುವುದು. ಜತೆಗೆ ವಿವಿಧ ರೀತಿಯ ಉಗ್ರ ಹೋರಾಟ ಹಮ್ಮಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.
ಕುಲಾಂತರಿ ತಳಿಯ ಹತ್ತಿ ಬೆಳೆ ವೈಫಲ್ಯಕ್ಕೆ ನಕಲಿ ಬಿತ್ತನೆ ಬೀಜ ಕಾರಣ ಎಂಬುದು ಈಗಾಗಲೇ ದೃಢಪಟ್ಟಿದೆ. ಕೃಷಿಗಾಗಿ ಸಾಲ ಮಾಡಿದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ರೈತ ಮುಖಂಡ ಕೋಡಬಾಳ ಚಂದ್ರಪ್ಪ ಆಗ್ರಹಿಸಿದರು.
ಕನಕ ಬಿಟಿ ಹತ್ತಿ ಬಿತ್ತನೆ ಮಾಡಿದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿರುವುದರಿಂದ ಎಕರೆಗೆ ರು. 50 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಬಿ. ಪ್ರಕಾಶ್, ಜಗದೀಶ, ಬಸವಂತಪ್ಪ, ನಾಗಪ್ಪ, ಉಮೇಶ ಸೇರಿದಂತೆ ಇತರರು ಭಾಗವಹಿಸಿದ್ದರು.