ಕನ್ನಡ ಭಾಷೆಗೆ ಯಾರಿಂದಲೂ ಉಪಕಾರವಾಗಿಲ್ಲ
ಬಳ್ಳಾರಿ : ರಾಜ್ಯದಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸುವ ಹಂತದಲ್ಲಿದ್ದರೂ ಕನ್ನಡ ಭಾಷೆಗೆ ಮಾತ್ರ ಯಾರಿಂದಲೂ ಉಪಕಾರವಾಗಿಲ್ಲ ಎಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ರಂಗತೋರಣ ಸಂಸ್ಥೆಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನ ಪ್ರತಿವರ್ಷ ಸರ್ಕಾರ ನೀಡುವ ಅನುದಾನ, ಹಣ, ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕುರಿತು ಹಲವಾರು ಚರ್ಚೆಗಳು ನಡೆಯುತ್ತವೆ. ನಂತರ ಸಮ್ಮೇಳನ ನಡೆಯುತ್ತದೆ. ಆದರೆ, ಎಲ್ಲ ಸಮ್ಮೇಳನಗಳಲ್ಲಿ ನಮ್ಮನ್ನು ಆಹ್ವಾನಿಸಿಲ್ಲ, ವೇದಿಕೆ ಮೇಲೆ ಕರೆದಿಲ್ಲ. ಭಾಷಣ ನೀಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ ಹೊರತು, ಸಮ್ಮೇಳನಗಳಲ್ಲಿ ಕನ್ನಡ ಭಾಷೆಯ ಕುರಿತು ಕೈಗೊಂಡ ಯಾವೊಂದು ನಿರ್ಣಯಗಳು ಜಾರಿಗೆ ಬಂದಿಲ್ಲ. ಅವು ಜಾರಿಗೆ ಬಂದಾಗ ಮಾತ್ರ ಸಮ್ಮೇಳನದ ಸಾರ್ಥಕತೆ ತಿಳಿಯುತ್ತದೆ ಎಂದರು.
ಆದರೆ, ರಂಗತೋರಣ ಎಂಬ ಶುದ್ಧ ಕನ್ನಡದ ಹೆಸರಲ್ಲಿರುವ ಸಂಸ್ಥೆಯಿಂದ 9ನೇ ಬಾರಿಗೆ ಹಮ್ಮಿಕೊಳ್ಳುತ್ತಿರುವ ವಿದ್ಯಾರ್ಥಿ ನಾಟಕೋತ್ಸವದಿಂದ ಹಲವಾರು ಯುವಕರಿಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬಲು ಸಾಧ್ಯವಾಗುತ್ತದೆ. ಮುಂದೆ ಇನ್ನಷ್ಟು ನಾಟಕಗಳಲ್ಲಿ ಅಭಿನಯಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ನಾಟಕದಿಂದ ಮನ ಪರಿವರ್ತನೆ: ಸಮ್ಮೇಳನಾಧ್ಯಕ್ಷ ಮಂಡ್ಯ ರಮೇಶ್ ಮಾತನಾಡಿ, ಬಳ್ಳಾರಿ ಎಂದರೆ, ಬಳ್ಳಾರಿ ರಾಘವ, ಬಳ್ಳಾರಿ ಲಲಿತಾ, ಜೋಳದರಾಶಿ ದೊಡ್ಡನಗೌಡ, ಬೆಳಗಲ್ ವೀರಣ್ಣ, ಬೀಚಿ, ಸುಭದ್ರಮ್ಮ ಮನ್ಸೂರ್, ಎಂ.ಪಿ. ಪ್ರಕಾಶ್, ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಎಂಬುದು ಮಾತ್ರ ಗೊತ್ತಿತ್ತು. ಆದರೆ, 9 ವರ್ಷಗಳಿಂದ ನಾಟಕಗಳನ್ನು ಆಯೋಜಿಸುತ್ತಾ ಬರುತ್ತಿರುವ ರಂಗತೋರಣ ಇದೆ ಎಂಬುದನ್ನು ತಿಳಿಯುತ್ತದೆ. ಮನುಷ್ಯ ಮನುಷ್ಯರನ್ನು ಅರಿಯಲು, ಮನುಷ್ಯತ್ವ ರೂಪಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ. ಹಲವು ದುಶ್ಚಟಗಳಿಂದ ಕೂಡಿದ್ದ ಮಹಾತ್ಮ ಗಾಂಧಿಯ ಮನ ಪರಿವರ್ತನೆ ಮಾಡಿದ್ದು ನಾಟಕ ಎಂದು ಹೇಳಿದರು.
ರಂಗತೋರಣ ಸಂಸ್ಥೆ ಅಧ್ಯಕ್ಷ ಭೀಮಸೇನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಮಂಡ್ಯ ರಮೇಶ್ ರಂಗತೋರಣದ ಧ್ವಜಾರೋಹಣ ನೆರವೇರಿಸಿದರು. ನಂತರ ನುಡಿತೋರಣ ಎಂಬ ಪತ್ರಿಕೆ ಬಿಡುಗಡೆಗೊಳಿಸಿದರು. ಅನಂತರ ಕೊಪ್ಪಳದ ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ 'ಇವ ನಮ್ಮವ' ಎಂಬ ನಾಟಕ ಪ್ರದರ್ಶಿಸಿತು. ಹಾಸನ ಜಿಲ್ಲೆಯ ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ವೀರಪ್ಪನ್ ಭೂತ, ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನಿಂದ ದಂಗೆ ಮುಂಚಿನ ದಿನಗಳು ಎಂಬ ನಾಟಕ ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ನಾಟಕೋತ್ಸವದ ಕಾರ್ಯದರ್ಶಿ ಪಿ. ಸುರೇಶ್ ಶೆಟ್ಟಿ, ವೀ.ವಿ. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಪಲ್ಲೇದ ಪಂಪಾಪತಿ, ವಕೀಲರ ಸಂಘದ ಅಧ್ಯಕ್ಷ ಪಟೇಲ್ ಸಿದ್ದಾರೆಡ್ಡಿ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಅಡವಿಸ್ವಾಮಿ, ಸಿದ್ದೇಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ. ಚನ್ನಪ್ಪ ಇದ್ದರು.