ಕೆರೆ ಅಭಿವೃದ್ಧಿ ಸಂಘಗಳಿಗೆ 34 ಕೆರೆ ಹಸ್ತಾಂತರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 26
ಜಿಲ್ಲೆಯ ಸಂಡೂರು ತಾಲೂಕಿನ 19, ಕೂಡ್ಲಿಗಿಯ 11 ಹಾಗೂ ಹೊಸಪೇಟೆ ತಾಲೂಕಿನ 4 ಕೆರೆ ಸೇರಿದಂತೆ ಜಿಲ್ಲೆಯ ಒಟ್ಟು 34 ಕೆರೆಗಳ ನಿರ್ವಹಣೆಗಾಗಿ ಕೆರೆ ಅಭಿವೃದ್ಧಿ ಸಂಘಗಳಿಗೆ ಹಸ್ತಾಂತರಿಸಲು ಅನುಮೋದನೆ ನೀಡಲಾಯಿತು.
ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರದ ಮೈರಾಡ ತರಬೇತಿ ಕೇಂದ್ರದಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ ಅಧ್ಯಕ್ಷತೆಯಲ್ಲಿ ಈಚೆಗೆ ಜರುಗಿದ ಜಿಲ್ಲೆಯ ಕೆರೆ ಬಳಕೆದಾರರ ಸಂಘಗಳಿಗೆ ಕೆರೆ ನಿರ್ವಹಣಾ ಹಸ್ತಾಂತರದ ಜಿಲ್ಲಾ ಮಟ್ಟದ ಅನುಮೋದನಾ ಸಮಿತಿ ಸಭೆಯಲ್ಲಿ ಅನುಮೋದನೆಗೆ ಒಪ್ಪಿಗೆ ನೀಡಿದರು.
ಅನಂತರ ಮಾತನಾಡಿ, ಸರ್ಕಾರ ವಿಶ್ವಬ್ಯಾಂಕ್ನ ಧನ ಸಹಾಯದೊಂದಿಗೆ ಜಲ ಸಂವರ್ಧನೆ ಯೋಜನಾ ಸಂಘದ ಮೂಲಕ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಮೊದಲಿನಿಂದಲೂ ಕೆರೆಗಳು ನೀರಿನ ಸಂಗ್ರಹಣೆ ಮಾಡಲು ಇರುವ ಸಾಂಪ್ರದಾಯಿಕ ವ್ಯವಸ್ಥೆಗಳಾಗಿದ್ದವು. ಅನಂತರದ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಗುರುತು ಹಿಡಿಯಲಾರದಷ್ಟು ಹಾಳಾಗಿದ್ದನ್ನು ಕಂಡು ಸರ್ಕಾರ ಈ ಹಸ್ತಾಂತರ ಯೋಜನೆ ರೂಪಿಸಿದೆ ಎಂದರು.
ಭೌತಿಕ ಸ್ಥಿತಿ ಸುಧಾರಣೆ: ಈ ಯೋಜನೆಯಿಂದ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಗಳ ಮೂಲ ಅಭಿವೃದ್ಧಿಗಾಗಿ ಸ್ಥಳೀಯ ಸಂಘಗಳನ್ನು ರಚಿಸಿ ಕೆರೆಗಳ ಭೌತಿಕ ಸ್ಥಿತಿ ಸುಧಾರಣೆ, ಒತ್ತುವರಿ ನಿರ್ವಹಣೆ, ಒತ್ತುವರಿ ತೆರವುಗೊಳಿಸುವುದು, ನೀರು ಸಂಗ್ರಹಣೆ, ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದು, ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿ ಹೆಚ್ಚಿನ ಇಳುವರಿ ಪಡೆಯುವುದು, ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕಾರ್ಯಕ್ರಮ, ಕೆರೆ ಅಂಗಳದಲ್ಲಿ ಪರಿಸರ ನಿರ್ವಹಣೆ, ಕೈ ತೋಟದಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಕೆರೆಗಳ ಅಭಿವೃದ್ಧಿಗಾಗಿ ಹಸ್ತಾಂತರ ಪಡೆದ ಸಂಘಗಳು ಕೆರೆಗಳ ನಿರ್ವಹಣೆಯನ್ನು ತಾವೇ ಮಾಡಿಕೊಳ್ಳಬೇಕು. ಕೆರೆಗಳ ಒತ್ತುವರಿ ತೆರವುಗೊಳಿಸಲು ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಟಾಸ್ಕ್ಫೋರ್ಸ್ ಸಮಿತಿ ರಚಿಸಿ ಗುರಿ ನೀಡಲಾಗಿದೆ. ರೈತರು ಸಂಘಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿಪಿಯು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಮೀನುಗಾರಿಕೆ ಕೃಷಿ, ನೀರಿನ ತೆರಿಗೆ, ಹೂಳು ಮಾರಾಟ, ಕೆರೆಯಂಗಳದಲ್ಲಿ ಬೆಳೆಸಿದ ಗಿಡಗಳಿಂದ ಆದಾಯ ಸಂಗ್ರಹಣೆ, ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಮಾಹಿತಿ ನೀಡಲಾಗಿದೆ ಎಂದರು.
ಸಭೆಯಲ್ಲಿ ಹಲವು ಕೆರೆ ಅಭಿವೃದ್ಧಿ ಸಂಘದ ಪದಾಧಿಕಾರಿಗಳು, ಬಳ್ಳಾರಿ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ, ಹೊಸಪೇಟೆ ಉಪ ವಿಭಾಗದ ಪಂಚಾಯತ್ ರಾಜ್ ಇಲಾಖೆಯ ಎಇಇ, ತಹಸೀಲ್ದಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಡಣಾಪುರದ ಪಿಡಿಒ, ವಿಎ, ವಿವಿಧ ಕೆರೆ ಅಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.