ಖಾದರ್ ಭೇಟಿ: ಆಸ್ಪತ್ರೆ ಸಿಬ್ಬಂದಿ ತಬ್ಬಿಬ್ಬು
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 26
ಸ್ಥಳೀಯ ನೂರು ಹಾಸಿಗೆ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಶನಿವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.
ನಗರದ ನೂರು ಹಾಸಿಗೆ ಆಸ್ಪತ್ರೆಯ ಒಳಗೆ ಆರೋಗ್ಯ ಸಚಿವರು ಪ್ರವೇಶಿಸುತ್ತಿದ್ದಂತೆ ಆಸ್ಪತ್ರೆ ಸ್ವಚ್ಛತೆ ಇಲ್ಲದೆ ಕೆಟ್ಟ ವಾಸನೆ ಹಾಗೂ ಆಸ್ಪತ್ರೆಯಲ್ಲಿ ಸಮರ್ಪಕ ಸೌಲಭ್ಯಗಳು ಇಲ್ಲದೆ ಮಂಚದ ಮೇಲೆ ಮಲಗಿರುವ ರೋಗಿಗಳನ್ನು ಕಂಡು ಆಸ್ಪತ್ರೆಯ ವೈದ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಪುರುಷ ಹಾಗೂ ಮಹಿಳೆಯರ ವಾರ್ಡ್ಗಳಿಗೆ ಮತ್ತು ಹೆರಿಗೆ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿದೆಯೇ? ಅಥವಾ ಇಲ್ಲವೆ? ಹೆಸರು, ಊರು ಮತ್ತು ಎಷ್ಟು ದಿನಗಳಿಂದ ಆಸ್ಪತ್ರೆಯಲ್ಲಿದ್ದೀರಿ? ಯಾವ ರೀತಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಹಾಗೂ ಸಿಬ್ಬಂದಿ ವರ್ತನೆ ಯಾವ ರೀತಿಯಲ್ಲಿದೆ ಎಂಬ ಪ್ರಶ್ನೆಗಳನ್ನು ರೋಗಿಗಳಿಗೆ ಕೇಳಿ ಮಾಹಿತಿ ಪಡೆದದರು.
ವಾರದೊಳಗೆ ವರದಿ ನೀಡಿ: ಬೆಡ್ ಶೀಟ್ ಹಾಗೂ ದಿಂಬುಗಳು ಇಲ್ಲದೆ ಮಂಚದ ಮೇಲೆ ಮಲಗಿದ್ದ ರೋಗಿಗಳನ್ನು ಕಂಡು ಸ್ಥಳದಲ್ಲೇ ಇದ್ದ ವೈದ್ಯಾಧಿಕಾರಿಗಳ ವಿರುದ್ಧ ಗರಂ ಆದರು. ಸಾರ್ವಜನಿಕರ ಆರೋಗ್ಯಕ್ಕಾಗಿ ಸರ್ಕಾರ ಕೋಟ್ಯಂತರ ಹಣ ನೀಡುತ್ತಿದೆ. ಆದರೆ ರೋಗಿಗಳಿಗೆ ಬೇಡ್ ಶೀಟ್ ಹಾಗೂ ದಿಂಬುಗಳನ್ನು ಯಾಕೆ ನೀಡಿಲ್ಲ? ರೋಗಿಗಳಿಗೆ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡಬೇಕಿರುವುದು ವೈದ್ಯಾಧಿಕಾರಿಗಳ ಕರ್ತವ್ಯ. ಆದರೆ ರೋಗಿಗಳಿಗೆ ಮೂಲ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ. ಈ ಕುರಿತು ವಾರದೊಳಗೆ ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಹಾಗೂ ಸೌಲಭ್ಯಗಳು ಇಲ್ಲದಿರುವ ಬಗ್ಗೆ ವರದಿ ನೀಡುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.
ಮಡಿಲು ಕಿಟ್ ನೀಡಿ: ನಂತರ ಹೆರಿಗೆ ವಾರ್ಡ್ಗೆ ತೆರಳಿ ಬಾಣಂತಿಯರಿಗೆ ಮಡಿಲು ಕಿಟ್ಟು ನೀಡದಿರುವುದನ್ನು, ವಾರ್ಡ್ನ ಕಿಟಿಕಿಯ ಗ್ಲಾಸ್ಗಳು ಹಾಗೂ ಮೆಷ್ಗಳು ಕಿತ್ತು ಹೋಗಿರುವುದನ್ನು ಮತ್ತು ಸ್ವಚ್ಛತೆ ಇಲ್ಲದಿರುವುದನ್ನು ಕಂಡ ಸಚಿವರು ಹೆರಿಗೆಯಾದ ಸಂದರ್ಭದಲ್ಲೇ ಮಡಿಲು ಕಿಟ್ಗಳನ್ನು ಬಾಣಂತಿಯರಿಗೆ ನೀಡಬೇಕು. ಕಿಟ್ಗಳನ್ನು ವಿತರಿಸುವುದಕ್ಕಾಗಿ ಸರ್ಕಾರ ನೀಡಿದೆ. ಬಾಣಂತಿಯರು ಮನೆಗೆ ಹೋಗುವಾಗ ಮಡಿಲು ಕಿಟ್ ನೀಡಿದರೆ ಯಾವುದೆ ಪ್ರಯೋಜನವಿಲ್ಲ. ಆಸ್ಪತ್ರೆಯಲ್ಲೇ ವಿತರಿಸಬೇಕು ಎಂದು ತಿಳಿಸಿದರು.
ಆಸ್ಪತ್ರೆ ಸ್ವಚ್ಛವಾಗಿಡಲು ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ. ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗೆ ಸ್ವಚ್ಛತೆ ಕೈಗೊಳ್ಳುವಂತೆ ಸೂಚಿಸಬೇಕು. ಮುಂದಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳು ಕಂಡು ಬಂದಲ್ಲಿ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ತಕ್ಷಣ ಎಲ್ಲಾ ವಾರ್ಡ್ಗಳನ್ನು ಸ್ವಚ್ಛಗೊಳಿಸುವಂತೆ ಆರೋಗ್ಯ ಸಚಿವರು ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಾರಿಹಳ್ಳಿ ಶಿವಮೂರ್ತಿ, ಡಿ. ವೆಂಕಟರಮಣ, ನಗರಸಭಾ ಸದಸ್ಯರಾದ ಚಿದಾನಂದ, ಗುಡಿಗುಂಟಿ ಮಲ್ಲಿಕಾರ್ಜುನ, ಗೌಡ್ರು ರಾಮಚಂದ್ರ, ಕೆ. ಗೌಸ್, ನೂರ್ ಜಹಾನ್, ಮುಖಂಡರಾದ ಅಬೀದ್ ಹುಸೇನ್, ಎಚ್.ಎನ್.ಎಫ್. ಮಹಮ್ಮದ್ ಇಮಾಮ್ ನಿಯಾಜಿ, ತಾರಿಹಳ್ಳಿ ವೆಂಕಟೇಶ್, ಸಾಲಿ ಸಿದ್ದಯ್ಯಸ್ವಾಮಿ, ಶ್ರೀಕಂಠ, ರಜಿಯಾ ಬೇಗಂ, ಜೆ.ಎಸ್. ಸಲೀಂ, ರೈತ ಸಂಘದ ಅಧ್ಯಕ್ಷ ಜೆ. ಕಾರ್ತಿಕ್, ನಗರ ಘಟಕದ ಅಧ್ಯಕ್ಷ ಟಿ. ವೆಂಕಟೇಶ್, ಕರವೇ ತಾಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ನೂರು ಹಾಸಿಗೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎರ್ರಿಯಪ್ಪ ಇದ್ದರು.