ಬೆಂಬಲ ನಿಗದಿಗೆ ರೈತ ಸಂಘ ಒತ್ತಾಯ
ಬಳ್ಳಾರಿ: ರೈತರು ಬೆಳೆದ ಬತ್ತ ಹಾಗೂ ಇತರೆ ಬೆಳೆಗಳಿಗೆ ಸೂಕ್ತ, ನ್ಯಾಯೋಚಿತ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಜಿ. ಪುರುಷೋತ್ತಮಗೌಡ ಮಾತನಾಡಿ, ಈ ವರ್ಷ ಬತ್ತ ಹಾಗೂ ಇತರೆ ಬೆಳೆಗಳ ಬೆಲೆ ಕುಸಿತ ಕಂಡಿದೆ. ರಸಗೊಬ್ಬರ, ಕ್ರಿಮಿನಾಶಕ, ಡೀಸೆಲ್, ಟ್ರ್ಯಾಕ್ಟರ್ಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಒಂದು ಎಕರೆ ಬತ್ತ ಬೆಳೆಯಲು ರು. 20ರಿಂದ 25 ಸಾವಿರ ಖರ್ಚಾಗುತ್ತದೆ. ಪ್ರತಿಯೊಂದು ವಸ್ತು ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ನಿಗದಿಯಾಗದಿರುವುದು ಅನ್ಯಾಯ. ಕೂಡಲೇ ರಾಜ್ಯ ಸರ್ಕಾರ ಬತ್ತಕ್ಕೆ ಕನಿಷ್ಠ ರು. 2ರಿಂದ ಎರಡೂವರೆ ಸಾವಿರ, ಹತ್ತಿಗೆ ಕನಿಷ್ಠ ರು. 6,500, ಮೆಕ್ಕೆಜೋಳಕ್ಕೆ ರು. 1500 ಬೆಲೆ ನಿಗದಿ ಮಾಡಬೇಕೆಂದರು.
ಒಂದು ವೇಳೆ ಸರ್ಕಾರದಿಂದ ನ್ಯಾಯ ದೊರೆಯದಿದ್ದಲ್ಲಿ ಹೈ.ಕ.ದ 6 ಜಿಲ್ಲೆಗಳ ರೈತರೆಲ್ಲರೂ ಒಗ್ಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆ ನಂತರ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೋಣಿಬಸಪ್ಪ, ಪ್ರಧಾನ ಕಾರ್ಯದರ್ಶಿ ಲೋಕೇಶ್ಗೌಡ, ಬಿಡಿ ಹಳ್ಳಿ ಸತ್ಯನಾರಾಯಣ ರೆಡ್ಡಿ, ಮೋಕಾ ಸಿದ್ದನಗೌಡ, ಶ್ರೀಧರಗೌಡ, ಕೋಟೇಶ್ವರ ರೆಡ್ಡಿ, ಕೊಟ್ರೇಶ್ಗೌಡ, ಮೀನಳ್ಳಿ ವೀರೇಶ್ಗೌಡ, ದರೂರು ಶಾಂತನಗೌಡ, ಕುಂದಾಪುರ ನಾಗರಾಜ್, ಶರಣನಗೌಡ, ಜಡೆಮೂರ್ತಿ, ರಾಮಣ್ಣ, ಮಲ್ಲಾರೆಡ್ಡಿ, ವೀರೇಶ್ ನಾಯ್ಕ್, ವೀರಭದ್ರಗೌಡ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.