ಶಿಕ್ಷಕನ ಮೇಲೆ ಹಲ್ಲೆ: ಬಂಧನ
ಬಳ್ಳಾರಿ: ಬಳ್ಳಾರಿ ತಾಲೂಕಿನ ಅಂದ್ರಾಳ್ ಶಾಲೆಯ ಪ್ರಭಾರಿ ಮುಖ್ಯಗುರು ನಜೀರ್ಸಾಬ್ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಅಂದ್ರಾಳ್ ಸೀತಾರಾಂ ಹಾಗೂ ಗುತ್ತಿಗೆದಾರ ಅಂಜಿನಪ್ಪನನ್ನು ಬಳ್ಳಾರಿಯ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಂದ್ರಾಳ್ ಗ್ರಾಮದ ಸರ್ಕಾರಿ ಶಾಲೆಯ ಪ್ರಭಾರಿ ಮುಖ್ಯಗುರು ನಜೀರ್ಸಾಬ್ ಮೇಲೆ ಶಾಲೆಯ ಕೊಠಡಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸದಸ್ಯ ಅಂದ್ರಾಳ್ ಸೀತಾರಾಂ ಹಾಗೂ ಗುತ್ತಿಗೆದಾರ ಅಂಜಿನಪ್ಪ ಅವರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ಶಿಕ್ಷಕರು ನಗರದ ಬಿಇಒ ಕಚೇರಿ ಮುಂದೆ ಪ್ರತಿಭಟನೆ ಹಲ್ಲೆ ಮಾಡಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ ನಜೀರ್ಸಾಬ್ ಹಾಗೂ ಸರ್ಕಾರಿ ನೌಕರರ ಸಂಘದ ಸದಸ್ಯರು, ಶಿಕ್ಷಕರು ಎಪಿಎಂಪಿ ಪೊಲೀಸ್ ಠಾಣೆಗೆ ತೆರಳಿ ಪಾಲಿಕೆ ಸದಸ್ಯ ಅಂದ್ರಾಳ್ ಸೀತಾರಾಂ ಹಾಗೂ ಗುತ್ತಿಗೆದಾರ ಅಂಜಿನಪ್ಪ ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಮಾಡಿರುವ ಕುರಿತು ದೂರು ನೀಡಿದ್ದರು. ಪ್ರಕರಣವನ್ನು ಠಾಣಾ ಪಿಎಸ್ಐ ಬಿ. ನಿರಂಜನ್ಕುಮಾರ್ ಅವರು ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದರು.
ಅನಂತಪುರದಲ್ಲಿ ಬಂಧನ: ಅಂದ್ರಾಳ್ ಸೀತಾರಾಂ ಊರಲ್ಲಿ ಇರಲಿಲ್ಲ, ಈತನಿಗಾಗಿ ಎಪಿಎಂಸಿ ಠಾಣಾ ಪೊಲೀಸರು ಅಂದ್ರಾಳ್ ಸೀತಾರಾಂ ತೀವ್ರ ಹುಟುಕಾಟ ನಡೆಸಿದ್ದರು. ಆದರೆ ಸೀತಾರಾಂ ಆಂಧ್ರಪ್ರದೇಶದಲ್ಲಿರುವ ಮಾಹಿತಿ ಕಲೆ ಹಾಕಿದ ಪೊಲೀಸರು, ಠಾಣಾ ಪಿಎಸ್ಐ ನಿರಂಜನ್ಕುಮಾರ್ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿ, ಹೋಟೆಲ್ನಲ್ಲಿ ತಂಗಿದ್ದ ಸೀತಾರಾಂ ಹಾಗೂ ಗುತ್ತಿಗೆದಾರ ಅಂಜಿನಪ್ಪನನ್ನು ಬಂಧಿಸಿ, ಬಳ್ಳಾರಿಗೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.