ಸರ್ಕಾರಿ ಜಾಗ ಅತಿಕ್ರಮ: ಕೊಂಡಯ್ಯ ವಿರುದ್ಧ ಬಿಜೆಪಿ ಧರಣಿ
ಬಳ್ಳಾರಿ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿಕೊಳ್ಳುತ್ತಿರುವ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ, ನಗರದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಡರ್ ಬ್ರಿಡ್ಜ್, ರಾಯಲ್ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿತು. ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಹೆಸರಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಭಾರಿ ಮೌಲ್ಯದ ಜಾಗವನ್ನು 99 ವರ್ಷಗಳಿಗೆ ಗುತ್ತಿಗೆ ಪಡೆದು, ವಾಣಿಜ್ಯ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ. 5,070 ಚದರ ಅಡಿಯ ಜಾಗವನ್ನು ಪಾಲಿಕೆಯಲ್ಲಿ 2006, 2011 ಮತ್ತು 2013ರಲ್ಲಿ ಕಟ್ಟಡ ನವೀಕರಣಕ್ಕೆ ಪರವಾನಗಿ ಪಡೆದಿದ್ದಾರೆ. ಈ ಹಿಂದೆ ಇದ್ದ ಟ್ರಸ್ಟ್ನ ಸದಸ್ಯರನ್ನು ಕೈ ಬಿಟ್ಟು ತಮ್ಮ ಕುಟುಂಬ ಸದಸ್ಯರನ್ನೊಳಗೊಂಡ ಟ್ರಸ್ಟ್ ನಿರ್ಮಿಸಿಕೊಂಡು ತಮ್ಮ ಕುಟುಂಬ ಸ್ವಾರ್ಥಕ್ಕಾಗಿ ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
ಕೊಂಡಯ್ಯ ವಿರುದ್ಧ ಕ್ರಮ ಕೈಗೊಳ್ಳಿ: ತಮ್ಮ ಮನೆಯ ಸದಸ್ಯರನ್ನೇ ಟ್ರಸ್ಟ್ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ನೀತಿ, ನಿಯಮಗಳನ್ನು ಗಾಳಿಗೆ ತೂರಿರುವ ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೇವಾ ಚಟುವಟಿಕೆ ನೆಪದಲ್ಲಿ ಸರ್ಕಾರಿ ಜಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೊಂಡಯ್ಯ ಅವರ ಕ್ರಮ ಸರಿಯಲ್ಲ. ಜಿಲ್ಲಾಧಿಕಾರಿಗಳು ಈ ಕೂಡಲೇ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಟ್ರಸ್ಟ್ ನಿವೇಶನದ ದಾಖಲೆಗಳನ್ನು ಪರಿಶೀಲಿಸಿ, ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಎಂ.ಎಸ್. ಸೋಮಲಿಂಗಪ್ಪ, ಪಕ್ಷದ ಪ್ರಧಾನ ಕಾರ್ಯದರ್ಶಿ ಗೋನಾಳ ಮುರಹರಿಗೌಡ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಲ್ಲೇಶ್, ಎಚ್. ಹನುಮಂತಪ್ಪ, ಸುಮಾ ಗೌಡ, ಮಾಜಿ ಜಿಲ್ಲಾಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಮುಖಂಡರಾದ ವೇಮಣ್ಣ, ಮುದ್ದನಗೌಡ, ಶಿವಾರೆಡ್ಡಿ, ಕುಂದಾಪುರ ನಾಗರಾಜ್, ಅನಿಲ್ ನಾಯ್ಡು, ಕೃಷ್ಣ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.