ಇಂದು ಪ್ರಶಸ್ತಿಗಾಗಿ ಸ್ಪರ್ಧೆ
ಬಳ್ಳಾರಿ: ಮಕ್ಕಳ ದಿನಾಚರಣೆ ಅಂಗವಾಗಿ ಬಾಲ ಭವನದ ಆಶ್ರಯದಲ್ಲಿ ಅ. 28ರಂದು 9ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ತಾಲೂಕು ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಹಗರಿಬೊಮ್ಮನಹಳ್ಳಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿರುವ ಮಕ್ಕಳು ಮಾತ್ರ ಭಾಗವಹಿಸಬಹುದಾಗಿದೆ. ಸೃಜನಾತ್ಮಕ ಕಲೆ (ಚಿತ್ರಕಲೆ, ಕರಕುಶಲ, ಜೇಡಿ ಮಣ್ಣಿನ ಕಲೆ ಮೂರರಲ್ಲೂ ಕಡ್ಡಾಯ), ಸೃಜನಾತ್ಮಕ ಬರವಣಿಗೆ (ಕಥೆ, ಕವನ, ಪ್ರಬಂಧ ಬರೆಯುವುದು ಮೂರರಲ್ಲೂ ಕಡ್ಡಾಯ), ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ ಇವುಗಳಲ್ಲಿ ಯಾವುದಾದರು ಒಂದು) ಹಾಗೂ ವಿಜ್ಞಾನದಲ್ಲಿ ನೂತನ ಆವಿಷ್ಕಾರ (ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಒಂದು ವಿಷಯದ ಬಗ್ಗೆ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೀರ್ಪುಗಾರರ ಇನ್ನಿತರ ಪ್ರಶ್ನೆಗಳಿಗೆ ಉತ್ತರ) ಈ 4 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ನಿಗದಿತ ವೇಳೆಗೆ ಸರಿಯಾಗಿ ತಮ್ಮ ಹುಟ್ಟಿದ ದಿನಾಂಕ ದೃಢೀಕರಣ ಪತ್ರ ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅ. 28ರಂದು ಬೆಳಗ್ಗೆ 10 ಗಂಟೆಗೆ ಹಗರಿಬೊಮ್ಮನಹಳ್ಳಿಯ ಗುರುಭವನದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹಗರಿಬೊಮ್ಮನಹಳ್ಳಿ (ಎಪಿಎಂಸಿ ಕಟ್ಟಡ) ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅಥವಾ ದೂ.ಸಂ-08397-238156ನ್ನು ಸಂಪರ್ಕಿಸಬೇಕೆಂದು ಎಂದು ಹಗರಿಬೊಮ್ಮನಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಲೋಕಾಯುಕ್ತರ ಪ್ರವಾಸ
ಬಳ್ಳಾರಿ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅ. 28ರಿಂದ 31ರ ವರೆಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಸ್ವೀಕರಿಸಲಿದ್ದಾರೆ. ಅ. 28ರಂದು ಕೂಡ್ಲಿಗಿ, 29ರಂದು ಸಂಡೂರು ಹಾಗೂ ಹಗರಿಬೊಮ್ಮನಹಳ್ಳಿ, 30ರಂದು ಸಿರುಗುಪ್ಪ ಹಾಗೂ ಹೂವಿನಹಡಗಲಿ, 31ರಂದು ಬಳ್ಳಾರಿ ಹಾಗೂ ಹೊಸಪೇಟೆ ತಾಲೂಕಿನ ಸಾರ್ವಜನಿಕರ ಕುಂದುಕೊರತೆ ಇತ್ಯರ್ಥಪಡಿಸಲಿದ್ದಾರೆ. ಆಯಾ ದಿನಗಳಂದು ಸಂಬಂಧಿಸಿದ ತಾಲೂಕಿನ ಪ್ರವಾಸಿ ಮಂದಿರಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದು. ಬಳ್ಳಾರಿಯ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಚ್.ಎಸ್. ಗಂಗಾಧರಪ್ಪ ಅವರ ನೇತೃತ್ವದಲ್ಲಿ ಸಿರುಗುಪ್ಪ, ಸಂಡೂರು, ಬಳ್ಳಾರಿ ತಾಲೂಕಿನ ಕುಂದು ಕೊರತೆಗಳು ಹಾಗೂ ಹೊಸಪೇಟೆಯ ಲೋಕಾಯುಕ್ತ ಉಪಾಧೀಕ್ಷಕ ಎನ್.ಆರ್. ಮಹಾಂತರೆಡ್ಡಿ ನೇತೃತ್ವದಲ್ಲಿ ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ಅಹವಾಲು ಸ್ವೀಕರಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶಿದ್ಲಿಂಗಣ್ಣವರ್ ಎಸ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೊಣಗಳ ಕಾಟ: ಕೋಳಿ ಫಾರಂ ಸ್ಥಳಾಂತರಕ್ಕೆ ಒತ್ತಾಯ
ಹಗರಿಬೊಮ್ಮನಹಳ್ಳಿ: ನೊಣಗಳ ಕಾಟ ವಿಪರೀತವಾಗಿದ್ದು, ಕೂಡಲೆ ಕೋಳಿ ಫಾರಂ ಮುಚ್ಚುವಂತೆ ಆಗ್ರಹಿಸಿ ತಾಲೂಕಿನ ಕೆ. ಒಬಾಳಪುರ ಮತ್ತು ಕಾತ್ಯಾಯಿನಿಮರಡಿ ಗ್ರಾಮದ ನಾಗರಿಕರು ಭಾನುವಾರ ಕೋಳಿ ಫಾರಂ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಾತ್ಯಾಯಿನಿಮರಡಿ ಮತ್ತು ಒಬಾಳಪುರ ಮಧ್ಯೆ ಖಾಸಗಿ ಒಡೆತನದಲ್ಲಿ ಕೋಳಿ ಮರಿ ಉತ್ಪಾದಿಸುವ ಫಾರಂ ಇದ್ದು, ಈ ಫಾರಂ ಆರಂಭವಾದಾಗಿನಿಂದ ಈ ಗ್ರಾಮಗಳಲ್ಲಿ ನೊಣಗಳ ಕಾಟ ಸಹಿಸಿಕೊಳ್ಳಲು ಆಗದಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಊಟ ಮಾಡುವುದು ಸೇರಿದಂತೆ ದೈನಂದಿನ ಚಟುವಟಿಕೆಗಳಿಗೆ ನೊಣಗಳು ಅತಿಯಾಗಿ ಕಾಡುತ್ತಿವೆ. ಇದರಿಂದ ನಿತ್ಯ ಕಿರಿಕಿರಿ ಅಲ್ಲದೇ ರೋಗಗಳು ಹರಡುವ ಭೀತಿ ಇದೆ. ಕೂಡಲೆ ಕೋಳಿ ಫಾರಂ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಊಟಕ್ಕೆ ಕುಳಿತರೆ ನೊಣಗಳು ಊಟದ ತಟ್ಟೆಗೆ ಮುತ್ತಿಗೆ ಹಾಕುತ್ತವೆ. ಇದರಿಂದಾಗಿ ಊಟ ಮಾಡಲು ನಮಗೆ ಅಸಹ್ಯವಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನಾಲ್ಕೈದು ತಿಂಗಳು ಕಾಲವಕಾಶ ನೀಡುವಂತೆ ಕೋಳಿ ಫಾರಂ ಮಾಲೀಕರು ಮಾಡಿಕೊಂಡ ಮನವಿ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಮದ ಭರಮಪ್ಪ, ಯು. ಬಸವರಾಜ, ಭೀಮಪ್ಪ, ಜಂಬಣ್ಣ, ದುರುಗಪ್ಪ, ಗೋಣೆಪ್ಪ, ಶಾಂತಮ್ಮ, ಹುಲಿಗೆಮ್ಮ, ಹನುಮವ್ವ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.