ಬಿಡಾಡಿ ದನಗಳ ಆಶ್ರಯವೀ ರಸ್ತೆ
ನಗರದಲ್ಲಿ ರಸ್ತೆಗಳು ಸಂಪೂರ್ಣ ಹದೆಗಟ್ಟು ಹೋಗಿದ್ದು, ವಾಹನ ಸವಾರರು ತುಂಬಾ ತೊಂದರೆ ಎದುರಿಸುವಂತಾಗಿತ್ತು. ಇದೀಗ ಕೆಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂತೋಷ ಪಡುತ್ತೇವೆ. ಆದರೆ ಅದೇ ರಸ್ತೆಗಳ ಮೇಲೆ ಬಿಡಾಡಿ ದನಗಳು ಮಲಗುವುದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಅಡ್ಡಿಯಾಗುತ್ತಿದೆ. ಇದರಿಂದಾಗಿ ಕಚೇರಿಗೆ, ಶಾಲಾ-ಕಾಲೇಜಿಗೆ ತೆರಳಲು ಎಣಗಾಡಬೇಕಾದಿಗೆ. ಈ ಬಗ್ಗೆ ಯಾರಿಗೆ ದೂರು ನೀಡಬೇಕೆಂಬುದು ನಮಗೆ ತಿಳಿಯುತ್ತಿಲ್ಲ.
ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಿಂದ ದುರ್ಗಮ್ಮ ದೇವಸ್ಥಾನದ ವರೆಗೆ ಹೋಗುವ ರಸ್ತೆಯಲ್ಲಿ ಮಯೂರ ಹೋಟೆಲ್ ಎದುರುಗಡೆ, ಕಾಸ್ಮೋ ಪೊಲೀಟನ್ ಕ್ಲಬ್ ಮುಂದುಗಡೆ, ಸತ್ಯನಾರಾಯಣ ಪೇಟೆ ಮುಖ್ಯ ರಸ್ತೆ ಹೀಗೆ ವಿವಿಧ ಪ್ರದೇಶಗಳ ಮುಖ್ಯ ರಸ್ತೆಯಲ್ಲಿಯೇ ಬಿಡಾಡಿ ದನಗಳು ಮಲಗುವುದರಿಂದ ವಾಹನ ಸವಾರರು, ಪ್ರಯಾಣಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ವಾಹನಗಳನ್ನು ನಿಲ್ಲಿಸಿ ದನಗಳನ್ನು ಓಡಿಸುವುದೇ ಒಂದು ಕೆಸಲವಾಗುತ್ತದೆ. ಆ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೆ ಬೀಡಾಡಿ ದನಗಳು ದಿಢೀರ್ ಎದ್ದರೆ ಬೈಕ್ ಸವಾರ ಕೆಳಗೆ ಬೀಳುವ ಸಂದರ್ಭಗಳೇ ಹೆಚ್ಚು.
ಈ ಬಗ್ಗೆ ಪಾಲಿಕೆಯವರು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಬೀಡಾಡಿ ದನಗಳ ಕಾಟ ತಪ್ಪಿಸಲು ಕ್ರಮ ಕೈಗೊಂಡು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.
- ಏಕಾಂತ್, (ಬೀರಪ್ಪನ ಗುಡಿ ಬೀದಿ ನಿವಾಸಿ, ಬಳ್ಳಾರಿ)
ಟ್ರಾಫಿಕ್ ಗೋಳು
ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ನಿತ್ಯವು ಟ್ರಾಫಿಕ್ ಗೋಳು ತಪ್ಪಿಲ್ಲ. ಇಲ್ಲಿ ದಿನಾಲು ಸಮಸ್ಯೆಯನ್ನು ಎದುರಿಸಿದರೂ ಟ್ರಾಫಿಕ್ ಪೊಲೀಸರು ಎಚ್ಚೆತ್ತುಕೊಳ್ಳುತ್ತಿಲ್ಲ. ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯೂ ಅಷ್ಟೇ ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಟ್ರಾಫಿಕ್ ಸಮಸ್ಯೆ ಬಗೆಹರಿಸುವಲ್ಲಿ ಮಾತ್ರ ಸರಿಯಾದ ಕ್ರಮ ಜರುಗಿಸುತ್ತಿಲ್ಲ.
ಗಡಿಗಿ ಚನ್ನಪ್ಪ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಹಾಕಿದ್ದಾರೆ, ನಗರದ ದುರ್ಗಮ್ಮ ದೇವಸ್ಥಾನದಿಂದ ಗಡಿಗಿ ಚನ್ನಪ್ಪ ವೃತ್ತದ ಕಡೆಗೆ ಸಾಕಷ್ಟು ವಾಹನಗಳ ಸಂಚಾರ ಇದೆ. ಆದರೆ ಸಾರಿಗೆ ಸಂಸ್ಥೆಯ ಬಸ್ಗಳು ಹಳೆ ಬಸ್ ನಿಲ್ದಾಣದ ಎದುರಗಡೆ ಪ್ರಯಾಣಿಕರನ್ನು ಇಳಿಸುವುದರಿಂದ ಪ್ರಯಾಣಿಕರು ಇಳಿಯವವರೆಗೂ ಬಸ್ಸಿನ ಹಿಂದೆ ಸಾಕಷ್ಟು ವಾಹನಗಳು ಹಾಗೆಯೇ ನಿಲ್ಲಬೇಕಾಗುತ್ತದೆ. ಇನ್ನು ಟ್ರಾಫಿಕ್ ಸಿಗ್ನಲ್ ಪಲ್ಸ್ ರೇಟ್ ಕಡಿಮೆ ಇರುವುದರಿಂದ ಇತ್ತ ಟ್ರಾಫಿಕ್ ಜಾಮ್ ಹೆಚ್ಚಾಗುತ್ತದೆ.
ಹಲವು ದಿನಗಳಿಂದ ಈ ಸಮಸ್ಯೆಯನ್ನು ಎದುರಿಸಲಾಗುತ್ತಿದ್ದು, ಪ್ರಯಾಣಿಕರನ್ನು ಇಳಿಸುವ ಮೂಲಕ ಇತರ ವಾಹನ ಸವಾರಿಗೆ ತೊಂದರೆ ಮಾಡುತ್ತಿದ್ದಾರೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳುವ ಮೂಲಕ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇದು ದೊಡ್ಡ ಸಮಸ್ಯೆಯಲ್ಲ, ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಇದು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಟ್ರಾಫಿಕ್ ಪೊಲೀಸರು ಎಚ್ಚರ ವಹಿಸಿದರೆ ಸಮಸ್ಯೆಯನ್ನು ತಡೆಯಬಹುದು. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
- ಎಂ. ಬಸವರಾಜ್
(ತಾಳೂರು ರಸ್ತೆ ನಿವಾಸಿ, ಬಳ್ಳಾರಿ)
ತುಕ್ಕು ಹಿಡಿದ ತಂಗುದಾಣಗಳು
ಜಿಲ್ಲೆಯ ಶಾಸಕರು, ಸಂಸದರು ಸಾವಿರಾರು ರುಪಾಯಿ ಅನುದಾನದಲ್ಲಿ ನಿರ್ಮಿಸಿರುವ ಬಸ್ ತಂಗುದಾಣಗಳು ನಿರುಪಯುಕ್ತವಾಗಿವೆ. ಅಲ್ಲಿ ಬಸ್ಗಳು ನಿಲ್ಲುವುದಿಲ್ಲ, ಅದು ಸಾರ್ವಜನಿಕರು ಉಪಯೋಗಕ್ಕೆ ಬಾರದಾಗಿದೆ. ಇದರಿಂದಾಗಿ ಸರ್ಕಾರದ ಹಣ ಅನಗತ್ಯವಾಗಿ, ದುಂದುವೆಚ್ಚವಾದಂತಾಗಿದೆ.
ನಗರದ ಸಂಗಮ್ ಸರ್ಕಲ್ ಸಮೀಪದ ಅನಂತಪುರ ರಸ್ತೆ, ಕೌಲ್ಬಜಾರ್ 1ನೇ ಗೇಟ್, ವಿಮ್ಸ್ ಸಮೀಪದಲ್ಲಿ, ಕುಮಾರಸ್ವಾಮಿ ಗುಡಿ ಹತ್ತಿರ ಹೀಗೆ ನಗರದ ವಿವಿಧ ಪ್ರದೇಶಗಳಲ್ಲಿ ಶಾಸಕರು, ಸಂಸದರ ಅನುದಾನದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ ಅಲ್ಲಿ ಬಸ್ಗಳು ಮಾತ್ರ ನಿಲುವುದಿಲ್ಲ, ಇವು ನಿರುಪಯುಕ್ತವಾಗಿವೆ. ತಂಗುದಾಣ ನಿರ್ಮಿಸುವ ಪೂರ್ವದಲ್ಲಿ ಬಸ್ಗಳ ನಿಲುಗಡೆ ಇರುವ ಸ್ಥಳದಲ್ಲಿ ಮಾತ್ರ ನಿರ್ಮಿಸಬೇಕಿತ್ತು. ಆದರೆ ನಿರ್ಮಿಸುವ ಪೂರ್ವದಲ್ಲಿ ಆಲೋಚನೆ ಮಾಡದೆ, ಬಸ್ ತಂಗುದಾಣ ನಿರ್ಮಾಣ ಮಾಡಿದ್ದಾರೆ. ಅತ್ತ ಸಾರ್ವಜನಿಕರಿಗೆ ಉಪಯೋಗವಿಲ್ಲ, ಕೇವಲ ದೃಷ್ಟಿಗೊಂಬೆಗಳಂತೆ ಕಾಣಿಸುತ್ತಿವೆ. ಇವುಗಳ ಉಪಯೋಗ ಮಾಡುವ ದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ನಮ್ಮ ಆಶಯ.
- ಪಿ.ಎಸ್. ಪ್ರಸಾದ್ ಚೌದರಿ, (ಶಾಸ್ತ್ರಿ ನಗರ ನಿವಾಸಿ, ಬಳ್ಳಾರಿ)