ಭಕ್ತಾದಿಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಒದಗಿಸಿ: ಒತ್ತಾಯ
ಕೊಟ್ಟೂರು: ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದ ದರ್ಶನಕ್ಕೆ ನಿತ್ಯ ಆಗಮಿಸುವ ಭಕ್ತಾದಿಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸಿಕೊಡಲು ಧಾರ್ಮಿಕ ದತ್ತಿ ಇಲಾಖೆ ತಕ್ಷಣ ಮುಂದಾಗಬೇಕಿದೆ ಎಂದು ದೇವಸ್ಥಾನದ ಪ್ರಧಾನ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ ಒತ್ತಾಯಿಸಿದರು.
ಭಾನುವಾರ ದೇವಸ್ಥಾನಕ್ಕೆ ಆಗಮಿಸಿದ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮಹೇಶರನ್ನು ಬರಮಾಡಿಕೊಂಡು ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನೂತನ ಧರ್ಮಕರ್ತ ಬಳಗದವರಿಂದ ಸನ್ಮಾನಿಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಕಳೆದ 11ರಂದು ಪ್ರಧಾನ ಧರ್ಮಕರ್ತರಾಗಿ ತಾವು ಮತ್ತು ಇತರ ಮೂವರು ಸಹಧರ್ಮಕರ್ತರಾಗಿ ಅಧಿಕಾರ ವಹಿಸಿಕೊಂಡಿದ್ದೇವೆ. ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳು ಸೌಜನ್ಯಕ್ಕಾದರೂ ಇದೂವರೆಗೂ ಆಡಳಿತಕ್ಕೆ ಸಂಬಂಧಿಸಿದ ವಿಚಾರವಾಗಲೀ, ಅಭಿವೃದ್ಧಿ ಕುರಿತಾಗಲೀ ತಮ್ಮೊಂದಿಗೆ ಮಾತನಾಡದೇ ಅಗೌರವ ತೋರಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭ ದೂರಿದರು.
ಸ್ವಾಮಿಯ ದರ್ಶನಕ್ಕೆ ಪ್ರತಿ ಅಮಾವಾಸ್ಯೆ ದಿನದಂದು ಲಕ್ಷಾಂತರ ಭಕ್ತರು ಉದ್ದನೆಯ ಸರತಿ ಸಾಲಿನಲ್ಲಿ ಆಗಮಿಸುತ್ತಿದ್ದು, ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಕ್ಯೂ ಉದ್ದಕ್ಕೂ ಮೇಲುಗಡೆ ತಗಡು ಹಾಕಿಸುವ ಕೆಲಸಕ್ಕೆ ಇಲಾಖೆ ಮುಂದಾಗಬೇಕು. ದೇವಸ್ಥಾನದ ಮುಖ್ಯದ್ವಾರದ ಬಾಗಿಲಿಗೆ ಬೆಳ್ಳಿ ಕವಚ ಅಳವಡಿಸುವ ಕಾರ್ಯ ನೆನಗುದಿಗೆ ಬಿದ್ದಿದೆ. ಇದು ಸೇರಿದಂತೆ ಇತರ ಆರು ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಅನುಷ್ಠಾನಗೊಳಿಸುವಂತೆ ಪ್ರಧಾನ ಧರ್ಮಕರ್ತ ಕೊಟ್ರಯ್ಯ ಸಹಾಯಕ ಆಯುಕ್ತ ಮಹೇಶರನ್ನು ಒತ್ತಾಯಿಸಿದರು.
ಸಹ ಧರ್ಮಕರ್ತರಾದ ಸಿ.ಎಚ್.ಎಂ. ಗಂಗಾಧರ, ಕೆ.ಎಂ. ನಾಗರಾಜ ದೇವಸ್ಥಾನದ ಸಿಬ್ಬಂದಿ ಸೋಗಿ ವೀರಣ್ಣ, ಅರವಟಿಗೆ ಅಜ್ಜಪ್ಪ ಇದ್ದರು.